ADVERTISEMENT

ಬ್ಯಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ಯಶಸ್ವಿ

30 ಕೆ.ಜಿ ಇಳಿಸಿಕೊಂಡ ಮುವೀದ್ l ವರ್ಷದಲ್ಲಿ 100 ಕೆ.ಜಿಗೆ ಇಳಿಯಲಿದ್ದಾರೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 20:09 IST
Last Updated 16 ಮಾರ್ಚ್ 2018, 20:09 IST
ಮುವೀದ್‌ ಅಹಮದ್‌
ಮುವೀದ್‌ ಅಹಮದ್‌   

ಬೆಂಗಳೂರು: ಬರೋಬ್ಬರಿ 200 ಕೆ.ಜಿ ತೂಗುತ್ತಿದ್ದ ಮುವೀದ್‌ ಅಹಮದ್‌ ಎಂಬುವರಿಗೆ (35) ಗ್ಲೇನ್‌ಈಗಲ್ಸ್‌ ಗ್ಲೋಬಲ್‌ ಆಸ್ಪತ್ರೆಯ ವೈದ್ಯ ಮೊಯಿದ್ದೀನ್‌ ಅವರು ಯಶಸ್ವಿಯಾಗಿ ಬ್ಯಾರಿಯಾಟ್ರಿಕ್‌ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಚಿಕಿತ್ಸೆಯಿಂದ ಮುವೀದ್‌ 30 ಕೆ.ಜಿ ತೂಕ ಕಡಿಮೆಯಾಗಿದ್ದು, ವರ್ಷದಲ್ಲಿ 100 ಕೆ.ಜಿಗೆ ಇಳಿಯಲಿದ್ದಾರೆ ಎಂದು ವೈದ್ಯರು ತಿಳಿಸಿದರು.

‘ಹೆಚ್ಚಾಗಿ ಸಿಹಿ ತಿನ್ನುತ್ತಿದ್ದರಿಂದ 15 ವರ್ಷ ಇದ್ದಾಗಲೇ ಅಧಿಕ ತೂಕ ಹೊಂದಿದ್ದೆ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದರೂ ಭಾಗವಹಿಸಲು ಆಗದಂತಾಯಿತು. ತೂಕ ಕಡಿಮೆ ಮಾಡುವುದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದ್ದೆ. 10 ವರ್ಷ ಜಿಮ್‌ಗೂ ಹೋಗಿದ್ದೆ. ಆದರೆ ಯಾವುದೇ ರೀತಿಯ ಪ್ರಯೋಜನ ಆಗಿರಲಿಲ್ಲ’ ಎಂದು ವಿವರಿಸಿದರು.

ADVERTISEMENT

‘ಶಸ್ತ್ರಚಿಕಿತ್ಸೆಯಿಂದ ಬೊಜ್ಜು ಕಡಿಮೆ ಮಾಡಬಹುದು ಎಂಬುದು ಗೊತ್ತಾಯಿತು. ಆಸ್ಪತ್ರೆಯನ್ನು ಸಂಪರ್ಕಿಸಿದೆ. ತೂಕ ಕಡಿಮೆಯಾಗಿದ್ದರಿಂದ ನನ್ನಲ್ಲಿ ಆತ್ಮವಿಶ್ವಾಸ ಮೂಡಿದೆ’ ಎಂದರು.

‘ಸಹಜ ತೂಕಕ್ಕಿಂತ ಶೇ 20ರಷ್ಟು ಅಧಿಕವಾಗಿದ್ದರೂ ವ್ಯಕ್ತಿ ತೀವ್ರತರದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬೊಜ್ಜಿನ ಜೊತೆ ಸುಮಾರು 50 ಕಾಯಿಲೆಗಳು ಶುರುವಾಗುತ್ತವೆ. ಸಹಜ ಪ್ರಯತ್ನಗಳಿಂದ ಸ್ಥೂಲಕಾಯ ತಹಬಂದಿಗೆ ಬಾರದಿದ್ದರೆ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮೊರೆ ಹೋಗಬಹುದು’ ಎಂದು ಡಾ.ಮೊಯಿದ್ದೀನ್‌ ತಿಳಿಸಿದರು.

‘ಶಸ್ತ್ರಚಿಕಿತ್ಸೆ ವೇಳೆ ಹೆಚ್ಚು ರಕ್ತಸ್ರಾವವಾಗುತ್ತದೆ ಹಾಗೂ ಬಳಿಕ ದುಪ್ಪಟ್ಟು ಬೊಜ್ಜು ಬೆಳೆಯುತ್ತದೆ ಎಂಬ ಭಯ ಅನೇಕರಲ್ಲಿದೆ. ಅನುಭವಿ ವೈದ್ಯರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿದರೆ, ಆ ರೀತಿಯ ತೊಂದರೆಗಳು ಆಗುವುದಿಲ್ಲ. ನಮ್ಮಲ್ಲಿ ತಿಂಗಳಿಗೆ ಸರಾಸರಿ 5 ಶಸ್ತ್ರಚಿಕಿತ್ಸೆ
ಮಾಡುತ್ತೇವೆ. 15ರಿಂದ 20ರ ವಯೋಮಾನದವರೇ ಹೆಚ್ಚಾಗಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) 30ಕ್ಕಿಂತ ಹೆಚ್ಚಿದ್ದರೆ, ಅದನ್ನು ಸ್ಥೂಲಕಾಯ ಎನ್ನುತ್ತೇವೆ’ ಎಂದರು.
***
ಏನಿದು ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ?
ಹೊಟ್ಟೆಯೊಳಗೆ ವೈದ್ಯಕೀಯ ಸಾಧನವನ್ನು ತೂರಿಸಿ (ಗ್ಯಾಸ್ಟ್ರಿಕ್ ಬ್ಯಾಂಡಿಂಗ್) ಅಥವಾ ಹೊಟ್ಟೆಯ ಒಂದು ಭಾಗವನ್ನು ತೆಗೆಯುವ ಮೂಲಕ (ಸ್ಲೀವ್‌ ಗ್ಯಾಸ್ಟ್ರೆಕ್ಟಮಿ ಅಥವಾ ಬಿಲಿಯೋಪ್ಯಾಂಕ್ರಿಯಾಟಿಕ್ ಡೈವರ್ಶನ್ ವಿಥ್ ಡಿಯೋಡೆನಲ್ ಸ್ವಿಚ್) ಅಥವಾ ಸಣ್ಣ ಕರುಳನ್ನು ವಿಭಾಗಿಸುವ ಹಾಗೂ ಹೊಟ್ಟೆಯನ್ನು ಸಣ್ಣ ಚೀಲವಾಗಿ ಬದಲಾಯಿಸುವ (ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ) ಮೂಲಕ ತೂಕ ಇಳಿಸಲಾಗುತ್ತದೆ ಎಂದು ಮೊಯಿದ್ದೀನ್‌ ತಿಳಿಸಿದರು.
**
ಬೊಜ್ಜಿಗೆ ಕಾರಣಗಳು
* ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿ ಸೇವನೆ
* ಜೀವನಶೈಲಿ
* ನಿದ್ರೆಯ ಕೊರತೆ
* ತೂಕ ಹೆಚ್ಚಿಸಲು ಕಾರಣವಾಗುವ ಔಷಧಿಗಳು
* ವಯಸ್ಸು, ಲಿಂಗ, ಆನುವಂಶೀಯತೆ, ಪರಿಸರ ಬದಲಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.