ADVERTISEMENT

ಭಾನುವಾರವೂ ಮಳೆ; ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:58 IST
Last Updated 13 ಮೇ 2018, 19:58 IST
ಭಾನುವಾರವೂ ಮಳೆ; ಸಂಚಾರಕ್ಕೆ ತೊಂದರೆ
ಭಾನುವಾರವೂ ಮಳೆ; ಸಂಚಾರಕ್ಕೆ ತೊಂದರೆ   

ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದ ಮಳೆಗೆ ಓಕಳಿಪುರ ಜಂಕ್ಷನ್‌ನಲ್ಲಿರುವ ಅಂಡರ್‌ಪಾಸ್‌ನಲ್ಲಿ ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದ್ದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ತೊಂದರೆ ಅನುಭವಿಸಿದರು.

ಇಲ್ಲಿ ಸಿಗ್ನಲ್‌ ಮುಕ್ತ ಎಂಟು ಪಥದ ಕಾರಿಡಾರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರಿಂದ ಮಳೆ ನೀರು ಹರಿದು ಹೋಗಲು ದಾರಿಯೇ ಇಲ್ಲದಂತಾಗಿ ಅಂಡರ್‌ಪಾಸ್‌ನಲ್ಲಿ ಸಂಗ್ರಹವಾಗಿತ್ತು. ಮಳೆ ನಿಂತ ಸ್ವಲ್ಪ ಸಮಯದ ಬಳಿಕ ಸಂಚಾರ ಸುಗಮವಾಯಿತು.

ಗಾಳಿಯ ಅಬ್ಬರದಿಂದಾಗಿ ಹೊಂಬೇಗೌಡ ನಗರ, ವಿಜಯ ನಗರದ ಮೂರನೇ ಮುಖ್ಯ ರಸ್ತೆ, ಆರ್‌ಪಿಸಿ ಬಡಾವಣೆ, ಎಮ್‌. ಕೆ ಅಹಮ್ಮದ್‌ ಸ್ಟೋರ್ಸ್‌ ಮತ್ತು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದ ಬಳಿ ಮರಗಳು ಧರೆಗುರುಳಿವೆ. ಕೋರಮಂಗಲ, ಶಾಂತಿನಗರದಲ್ಲಿ ಮರದ ಟೊಂಗೆಗಳು ಮುರಿದು ರಸ್ತೆ ಹಾಗೂ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ADVERTISEMENT

ಎಂ.ಜಿ ರಸ್ತೆ, ಟ್ರಿನಿಟಿ ವೃತ್ತ, ಯಶವಂತಪುರ, ನಾಯಂಡ ಹಳ್ಳಿ, ಕಬ್ಬನ್‌ ಪಾರ್ಕ್‌, ಹಲಸೂರು ಗೇಟ್‌, ಹೈಗ್ರೌಂಡ್‌, ಇಂದಿರಾ ನಗರ, ಹಲಸೂರು, ಅಶೋಕ ನಗರ,  ಕೆ.ಆರ್‌.ಪುರ, ಶಿವಾಜಿ ನಗರ,  ಚಿಕ್ಕಪೇಟೆ, ಮೆಜೆಸ್ಟಿಕ್‌, ಸಿಟಿ ಮಾರ್ಕೆಟ್‌, ಮಾಗಡಿ ರಸ್ತೆ,  ಬ್ಯಾಟರಾಯನಪುರ, ಕೆಂಗೇರಿ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಲಾಲ್‌ಬಾಗ್‌ ಸೇರಿದಂತೆ ಅನೇಕ ಕಡೆಗಳಲ್ಲಿ ತುಂತುರು ಮಳೆಯಾಗಿದೆ.

ಮಳೆಯ ಆರ್ಭಟ ಕಡಿಮೆ ಇದ್ದಿದ್ದರಿಂದ ನಗರದಲ್ಲಿ ಸಂಚಾರ ದಟ್ಟಣೆಯ ಬಗ್ಗೆ ಹೆಚ್ಚಿನ ದೂರುಗಳು ಬರಲಿಲ್ಲ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.