ADVERTISEMENT

ಭಿನ್ನಾಭಿಪ್ರಾಯ ಮರೆತು ಪರಸ್ಪರ ಸಹಕಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2011, 20:45 IST
Last Updated 29 ಜನವರಿ 2011, 20:45 IST

ಬೆಂಗಳೂರು: ಪರಸ್ಪರ ಮುನಿಸಿಕೊಂಡಿದ್ದ ಮೇಯರ್ ಎಸ್.ಕೆ.ನಟರಾಜ್ ಹಾಗೂ ಆಯುಕ್ತ ಸಿದ್ದಯ್ಯ ಅವರು ಪಾಲಿಕೆಯಲ್ಲಿ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮರೆತು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸುವುದಾಗಿ ಇಬ್ಬರೂ ಹೇಳಿದರು.

ಶಿಕ್ಷಣ- ಕ್ರೀಡಾ ಸ್ಥಾಯಿ ಸಮಿತಿಯು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಮೇಯರ್, ‘ಸಂಸಾರದಲ್ಲಿ ಗಂಡ- ಹೆಂಡತಿ ಇರುವಂತೆ ಪಾಲಿಕೆಯಲ್ಲಿ ಮೇಯರ್ ಹಾಗೂ ಆಯುಕ್ತರು ಕಾರ್ಯ ನಿರ್ವಹಿಸಬೇಕು. ಕೆಲವೊಮ್ಮೆ ಭಿನ್ನಾಭಿಪ್ರಾಯ ಬರಬಹುದು. ಆಗ ಮಾತುಕತೆ ಮೂಲಕ ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಅದರಂತೆ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲಾಗುವುದು’ ಎಂದರು.

‘ಆಯುಕ್ತರ ಕಾರ್ಯ ನಿರ್ವಹಣೆಗೆ ಅಡ್ಡಿಪಡಿಸಿಲ್ಲ. ಆದರೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ನನ್ನ ಗಮನಕ್ಕೆ ತಂದು ಮುಂದುವರಿಯಲು ಸೂಚಿಸಲಾಗಿದೆ. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದರು.

ಬಳಿಕ ಮಾತನಾಡಿದ ಆಯುಕ್ತರು, ‘ಮೇಮೇಯರ್ ಸೇರಿದಂತೆ ಪಾಲಿಕೆಯ ಯಾವುದೇ ಸದಸ್ಯರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ಸಂಪರ್ಕ ಕೊರತೆಯಿಂದಾಗಿ ಗೊಂದಲವಾಗಿತ್ತು. ನನ್ನ ಕರ್ತವ್ಯ ನಿರ್ವಹಣೆಯಲ್ಲೂ ಕೆಲವು ಲೋಪಗಳಾಗಿದ್ದು, ಸರಿಪಡಿಸಿಕೊಳ್ಳುತ್ತೇನೆ’ ಎಂದರು.

‘ಕಾರ್ಯ ನಿರ್ವಹಣೆ ಸಂದರ್ಭದಲ್ಲಿ ಮೇಯರ್ ಅವರಿಗೆ ಸಮಗ್ರ ಮಾಹಿತಿ ನೀಡುತ್ತೇನೆ. ಪ್ರತಿ ವಿಷಯಗಳನ್ನು ಅವರ ಗಮನಕ್ಕೆ ತಂದು ಮುಂದುವರೆಯುತ್ತೇನೆ. ಮೇಯರ್ ಅವರಿಗೆ ಪೂರ್ಣ ಸಹಕರಿಸುತ್ತೇನೆ’ ಎಂದರು.

ಕೆಆರ್‌ಇಡಿಎಲ್‌ಗೆ ಕಾಮಗಾರಿ!
ಮೇಯರ್ ಹಾಗೂ ಉಪಮೇಯರ್ ನಿಧಿಯಡಿ ಕೈಗೊಳ್ಳುವ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಇಡಿಎಲ್) ವಹಿಸುವುದಕ್ಕೆ ಸಂಬಂಧಪಟ್ಟಂತೆ ಕೌನ್ಸಿಲ್ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿರುವುದಾಗಿ ಆಯುಕ್ತರು ನೀಡಿದ ಹೇಳಿಕೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

‘ಕೆಆರ್‌ಇಡಿಎಲ್ ಸಂಸ್ಥೆಗೆ ಪ್ರಮುಖ ಕಾಮಗಾರಿಗಳನ್ನು ವಹಿಸಲು ಅವಕಾಶವಿದೆ. ಈ ಸಂಬಂಧ ಸರ್ಕಾರ ಸುತ್ತೋಲೆ ಕೂಡ ಹೊರಡಿಸಿದೆ. ಹಾಗಾಗಿ ಮೇಯರ್ ಹಾಗೂ ಉಪಮೇಯರ್ ನಿಧಿಯಡಿ ಕೈಗೊಳ್ಳುವ ಕಾಮಗಾರಿಗಳನ್ನು ನಿಗಮಕ್ಕೆ ವಹಿಸುವ ಕೌನ್ಸಿಲ್ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಸಿದ್ದಯ್ಯ ಉತ್ತರಿಸಿದರು.

ಕೆಆರ್‌ಇಡಿಎಲ್ ನಿಗಮವು ಕಳಪೆ ಕಾಮಗಾರಿ ನಡೆಸುತ್ತಿದ್ದು, ಯಾವುದೇ ಕಾಮಗಾರಿ ನೀಡಬಾರದು ಎಂದು ಸದಸ್ಯರು ಈ ಹಿಂದೆ ಪಾಲಿಕೆ ಸಭೆಯಲ್ಲಿ ಪಕ್ಷಭೇದ ಮರೆತು ಒತ್ತಾಯಿಸಿದ್ದರು. ಈ ನಿಗಮವನ್ನು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಕೌನ್ಸಿಲ್ ನಿರ್ಣಯ ಸಹ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಂಧಾನ ಸಭೆ: ಪತ್ರಿಕಾಗೋಷ್ಠಿಗೆ ಆಗಮಿಸುವ ಮುನ್ನ ಮೇಯರ್ ಹಾಗೂ ಆಯುಕ್ತರ ನಡುವೆ ಸಂಧಾನ ಸಭೆ ನಡೆಯಿತು. ಆಡಳಿತ ಪಕ್ಷದ ನಾಯಕ ಬಿ.ಎಸ್.ಸತ್ಯನಾರಾಯಣ, ಶಿಕ್ಷಣ- ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಗಣೇಶ್, ಸದಸ್ಯ ಹರೀಶ್ ಅವರ ಸಮ್ಮುಖದಲ್ಲಿ ಸುಮಾರು 2 ಗಂಟೆ ಕಾಲ ಸಂಧಾನ ಮಾತುಕತೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.