ADVERTISEMENT

ಭೂಪರಿವರ್ತನೆ: ಲೋಕಾಯುಕ್ತ ತನಿಖೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 20:20 IST
Last Updated 24 ಜನವರಿ 2011, 20:20 IST

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಜನಾಂಗದವರಿಗೆ ಕೃಷಿ ಚಟುವಟಿಕೆಗೆಂದು ಮಂಜೂರಾದ ಎಷ್ಟು ಜಮೀನು ಕೃಷಿಯೇತರ ಜಮೀನಾಗಿ ಪರಿವರ್ತನೆಯಾಗಿದೆ ಎಂಬ ಬಗ್ಗೆ ಮಾಹಿತಿ ಬಯಸಿರುವ ಹೈಕೋರ್ಟ್, ಇಂತಹ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಸೋಮವಾರ ಆದೇಶಿಸಿದೆ.

ಬೆಂಗಳೂರು ನಗರದ ಹಾಲಿ ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯ ಹಾಗೂ ಅವರ ಹಿಂದಿನ ಜಿಲ್ಲಾಧಿಕಾರಿಗಳ ಸೇವಾ ಅವಧಿಯಲ್ಲಿ ನಡೆದಿರುವ ಭೂಪರಿವರ್ತನೆಗಳ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅವರು ಲೋಕಾಯುಕ್ತರಿಗೆ ಸೂಚಿಸಿದ್ದಾರೆ.

ಭೂಪರಿವರ್ತನೆಗೆ ಸಂಬಂಧಿಸಿದಂತೆ ಲೀಲಾವತಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಜಾಲ ಹೋಬಳಿಯ ಕುದುರೆಗೆರೆ ಗ್ರಾಮದಲ್ಲಿನ ಸರ್ವೇ ನಂ. 59ರಲ್ಲಿನ 4.03 ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅವರು ಅರ್ಜಿ ಸಲ್ಲಿಸಿದ್ದರು.

ಪರಿಶಿಷ್ಟ ಜಾತಿ ಮತ್ತು ಜನಾಂಗದ ಕೋಟಾದ ಅಡಿ ಆರ್.ಪಿ.ರುದ್ರಪ್ಪ ಎನ್ನುವವರಿಗೆ ಮಂಜೂರಾಗಿದ್ದ ಈ ಜಮೀನನ್ನು ಅವರು ಕೃಷ್ಣೇಗೌಡ ಎನ್ನುವವರಿಗೆ ಮಾರಾಟ ಮಾಡಿದ್ದರು. ಕೃಷಿ ಜಮೀನಾಗಿದ್ದ ಇದನ್ನು ಕೃಷಿಯೇತರ ಜಮೀನನ್ನಾಗಿ ಮಾರ್ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಕೃಷ್ಣೇಗೌಡ ಅವರಿಗೆ 1997ರಲ್ಲಿ ಅನುಮತಿ ನೀಡಿದ್ದರು.

ಭೂಪರಿವರ್ತನೆ ನಂತರ ಅವರು ಜಮೀನನ್ನು ಲೀಲಾವತಿ ಅವರಿಗೆ ಮಾರಿದ್ದರು. ಆದರೆ 2009ರ ಸೆ.25ರಂದು ಕೃಷ್ಣೇಗೌಡ ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದ ಜಿಲ್ಲಾಧಿಕಾರಿಗಳು, ‘ಇದು ಪರಿಶಿಷ್ಟ ಜಾತಿ ಮತ್ತು ಜನಾಂಗಕ್ಕೆ ಮಂಜೂರಾಗಿದ್ದ ಜಮೀನಾಗಿರುವ ಹಿನ್ನೆಲೆಯಲ್ಲಿ ಇದನ್ನು ಪರಿವರ್ತನೆ ಮಾಡಿರುವುದು ಸರಿಯಲ್ಲ’ ಎಂದು ತಿಳಿಸಿ ಅವರಿಗೆ ನೀಡಲಾಗಿದ್ದ ಜಮೀನನ್ನು ರದ್ದು ಮಾಡಿದರು. ಅದನ್ನು ಅವರು ಲೀಲಾವತಿಗೆ ಮಾರಿದ್ದ ಹಿನ್ನೆಲೆಯಲ್ಲಿ, ಅವರು ಜಮೀನು ಕಳೆದುಕೊಳ್ಳಬೇಕಾಯಿತು.

ಇದನ್ನು ಲೀಲಾವತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಮಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಜಿಲ್ಲಾಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ವಾದಿಸಿದ್ದರು. ನಿಯಮ ಉಲ್ಲಂಘಿಸಿ ಇವರಿಗೆ ಜಮೀನು ಮಂಜೂರಾದ ಕಾರಣ, ಅವರ ಅರ್ಜಿಯನ್ನು ನ್ಯಾಯಮೂರ್ತಿಗಳು ವಜಾ ಮಾಡಿದರು. ಆದರೆ ಈ ರೀತಿಯ ಅನೇಕ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸುವ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಕೆರೆ ರಕ್ಷಣೆ: ಮಾಹಿತಿಗೆ ಆದೇಶ
ನಗರ ಹಾಗೂ ಸುತ್ತಮುತ್ತಲಿನ ಕೆರೆಗಳ ರಕ್ಷಣೆ ಯಾವ ರೀತಿ ಮಾಡಬಹುದು, ಅವುಗಳ ವಸ್ತುಸ್ಥಿತಿ ಹೇಗಿದೆ ಎಂಬ ವಿಚಾರಣೆ ನಡೆಸಲು ಹೈಕೋರ್ಟ್‌ನಿಂದ ನೇಮಕಗೊಂಡಿರುವ ಆರು ಮಂದಿ ಗಣ್ಯರ ನೇತೃತ್ವದ ಸಮಿತಿಯು ಫೆ.28ರ ಒಳಗೆ ವರದಿ ನೀಡುವಂತೆ ಕೋರ್ಟ್ ಸೋಮವಾರ ಆದೇಶಿಸಿದೆ.

ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿನ ಈ ಸಮಿತಿಯು, ಬಿಬಿಎಂಪಿ ಹಾಗೂ ಬಿಡಿಎ ಆಯುಕ್ತ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಮಳೆನೀರು ಕಾಲುವೆ ಇಲಾಖೆಯ ಮುಖ್ಯ ಎಂಜಿನಿಯರ್ ಅವರನ್ನು ಒಳಗೊಂಡಿದೆ.

ಹೈದರಾಬಾದ್ ಮೂಲದ ಬಯೋಟಾ ನ್ಯಾಚುರಲ್ ಸಿಸ್ಟಮ್ಸ್‌ಗೆ ಅಗರ ಕೆರೆಯನ್ನು, ಈಸ್ಟ್ ಇಂಡಿಯಾ ಹೋಟೆಲ್ಸ್ ಲಿಮಿಟೆಡ್‌ಗೆ ಹೆಬ್ಬಾಳ ಕೆರೆಯನ್ನು ಹಾಗೂ ಲುಂಬಿನಿ ಗಾರ್ಡನ್ಸ್ ಲಿಮಿಟೆಡ್‌ಗೆ ನಾಗವಾರ ಕೆರೆಯನ್ನು ಮಾರಾಟ ಮಾಡುವ ಸಂಬಂಧ 2004ರ ನವೆಂಬರ್ 27ರಂದು ನಡೆದಿರುವ ಒಪ್ಪಂದಗಳನ್ನು ಪ್ರಶ್ನಿಸಿ ಪರಿಸರವಾದಿ ಸಂಘಟನೆ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಸಮಿತಿ ರಚಿಸಿದೆ.

ಆಕ್ಷೇಪಣೆ ಸಲ್ಲಿಕೆಗೆ ಆದೇಶ
ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸರ್ ಮದನಿಗೆ ಜಾಮೀನು ನೀಡಬೇಕೆ ಬೇಡವೇ ಎಂಬ ಬಗ್ಗೆ ಸರ್ಕಾರ ತನ್ನ ನಿಲುವನ್ನು ತಿಳಿಸುವಂತೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಈ ಸಂಬಂಧ, ಜಾಮೀನು ಕೋರಿ ಈತ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸಲು ಕೊನೆಯ ಅವಕಾಶವನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ. ಫೆ.8ರ ಒಳಗೆ ಹೇಳಿಕೆ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಲಾಗಿದೆ.

ಕಳೆದ ಜೂನ್ 11ರಂದು ಈತ ಸೇರಿದಂತೆ 31 ಮಂದಿಯ ವಿರುದ್ಧ ಹೆಚ್ಚುವರಿ ದೋಷಾರೋಪಣಾ ಪಟ್ಟಿ ತಯಾರು ಮಾಡಿ ಆತನನ್ನು ಬಂಧಿಸಲಾಗಿದೆ.ಸದ್ಯ ಆತ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲದ್ದಾನೆ. ತನ್ನ ವಿರುದ್ಧದ ಆರೋಪಗಳ ಕುರಿತಾಗಿ ಯಾವುದೇ ದಾಖಲೆಗಳು ಇಲ್ಲ. ಆದರೂ ವಿನಾಕಾರಣ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಆತ ಕೋರಿದ್ದಾನೆ. ವಿಚಾರಣೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.