ADVERTISEMENT

ಭೂಮಿ ಮಂಜೂರಾತಿ ರದ್ದು ಪ್ರಕ್ರಿಯೆ ಆರಂಭ

ವಿ.ಎಸ್.ಸುಬ್ರಹ್ಮಣ್ಯ
Published 14 ಸೆಪ್ಟೆಂಬರ್ 2011, 18:30 IST
Last Updated 14 ಸೆಪ್ಟೆಂಬರ್ 2011, 18:30 IST

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಕಟ್ಟಡಗಳಿರುವ ಐದು ಎಕರೆ ಭೂಮಿಯ ಮಂಜೂರಾತಿಯನ್ನು ರದ್ದು ಮಾಡುವ ಪ್ರಕ್ರಿಯೆಗೆ ಬೆಂಗಳೂರು ನಗರ ಜಿಲ್ಲಾಡಳಿತ ಚಾಲನೆ ನೀಡಿದೆ.

ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗಾಗಿ ಸರ್ಕಾರದಿಂದ ಭೂಮಿ ಪಡೆದು ಖಾಸಗಿ ಆಸ್ಪತ್ರೆಗೆ ಗುತ್ತಿಗೆ ನೀಡಿರುವ ವ್ಯಕ್ತಿಯ ಹೆಸರಿಗೆ ನೀಡಲಾದ ಮಂಜೂರಾತಿ ಆದೇಶ ರದ್ದತಿಗೆ ಅನುಮತಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿ ಇತ್ತೀಚೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಸೈಯದ್ ನಿಸಾರ್ ಎಂಬ ವ್ಯಕ್ತಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವುದಾಗಿ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ 5 ಎಕರೆ ಭೂಮಿ ಪಡೆದಿದ್ದರು. ಬಳಿಕ ಆಸ್ಪತ್ರೆ ನಿರ್ಮಿಸದೇ ಅಪೊಲೋ ಆಸ್ಪತ್ರೆಗೆ ಜಾಗವನ್ನು ಗುತ್ತಿಗೆಗೆ ನೀಡಿ ಬಾಡಿಗೆ ಪಡೆಯುತ್ತಿದ್ದರು. ಸದರಿ ಭೂ ಮಂಜೂರಾತಿಯನ್ನೇ ರದ್ದು ಮಾಡುವಂತೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ವಿ.ಬಾಲಸುಬ್ರಮಣಿಯನ್ ಇದೇ ಜೂನ್‌ನಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಅಮೆರಿಕದಲ್ಲಿ ತರಬೇತಿ ಪಡೆದಿರುವುದಾಗಿ ಹೇಳಿಕೊಂಡಿದ್ದ ಸೈಯದ್ ನಿಸಾರ್, 1991ರಲ್ಲಿ ರಾಜ್ಯ ಸರ್ಕಾರದಿಂದ ಐದು ಎಕರೆ ಭೂಮಿ ಪಡೆದುಕೊಂಡಿದ್ದರು. ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ನಡೆಸಿದ ಮೌಲ್ಯಮಾಪನದ ಪ್ರಕಾರ 44 ಕೋಟಿ ರೂಪಾಯಿ ಮೌಲ್ಯ ಇರುವ ಈ ಭೂಮಿಯನ್ನು ಕೇವಲ ಹತ್ತು ಲಕ್ಷ ರೂಪಾಯಿ ಮೊತ್ತಕ್ಕೆ ನೀಡಲಾಗಿತ್ತು.

ನಿಗದಿತ ಉದ್ದೇಶಕ್ಕಾಗಿ ಮಾತ್ರ ಭೂಮಿಯನ್ನು ಬಳಕೆ ಮಾಡಬೇಕು ಎಂಬ ಷರತ್ತನ್ನು ಮಂಜೂರಾತಿ ಆದೇಶದಲ್ಲಿ ವಿಧಿಸಲಾಗಿತ್ತು. ಮಂಜೂರಾತಿ ನಂತರ ಈ ಭೂಮಿಯಲ್ಲಿ ಯಾವುದೇ ಆಸ್ಪತ್ರೆಯನ್ನೂ ನಿರ್ಮಿಸಿರಲಿಲ್ಲ. ಮಂಜೂರಾತಿ ಆದೇಶದ ಷರತ್ತು ಉಲ್ಲಂಘಿಸಿ ಸೈಯದ್ ನಿಸಾರ್, ಅಪೋಲೊ ಆಸ್ಪತ್ರೆಗೆ ಈ ಭೂಮಿಯನ್ನು ಗುತ್ತಿಗೆ ನೀಡಿದ್ದರು. ಈಗಲೂ ಅದೇ ಗುತ್ತಿಗೆ ಆಧಾರದಲ್ಲಿ ಅಪೋಲೊ ಆಸ್ಪತ್ರೆ ಈ ಭೂಮಿಯನ್ನು ಬಳಸುತ್ತಿದೆ.

ಬಯಲಿಗೆ ಬಂದ ಪ್ರಕರಣ: ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕೆಂದು ಸರ್ಕಾರ ನೀಡಿದ ಭೂಮಿಯನ್ನು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಗುತ್ತಿಗೆಗೆ ನೀಡಿರುವ ವಿಷಯ ಬಯಲಿಗೆ ಬಂದಿರಲಿಲ್ಲ. 2009ರ ಆಗಸ್ಟ್‌ನಲ್ಲಿ ಕಾರ್ಯಪಡೆ ಈ ವಿಷಯವನ್ನು ಪತ್ತೆಹಚ್ಚಿ, ತನಿಖೆ ಆರಂಭಿಸಿತ್ತು. ಸರ್ಕಾರದಿಂದ ಪಡೆದ ಭೂಮಿಯನ್ನು ಹಲವು ವರ್ಷಗಳಿಂದ ಅಪೋಲೊ ಆಸ್ಪತ್ರೆಗೆ ಗುತ್ತಿಗೆಗೆ ನೀಡಿ ದೊಡ್ಡ ಪ್ರಮಾಣದ ಬಾಡಿಗೆ ಪಡೆಯುತ್ತಿರುವುದು ತನಿಖೆಯಲ್ಲಿ ಬಯಲಿಗೆ ಬಂದಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬಾಲಸುಬ್ರಮಣಿಯನ್, ಈ ಮಂಜೂರಾತಿ ಆದೇಶವನ್ನು ರದ್ದುಮಾಡಿ, ಆಸ್ಪತ್ರೆಯ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಶಿಫಾರಸು ಮಾಡಿದ್ದರು. ಇಲ್ಲವಾದಲ್ಲಿ ಅಪೋಲೊ ಆಸ್ಪತ್ರೆಯಿಂದ ಈ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡುವಂತೆಯೂ ಶಿಫಾರಸಿನಲ್ಲಿ ತಿಳಿಸಿದ್ದರು.

ಪ್ರಕ್ರಿಯೆ ಆರಂಭ: ಕಾರ್ಯಪಡೆ ಶಿಫಾರಸುಗಳ ಬಗ್ಗೆ ಪರಿಶೀಲನೆ ನಡೆಸಿದ್ದ ಬೆಂಗಳೂರು ನಗರ ಜಿಲ್ಲಾಡಳಿತ, ಭೂ ಕಂದಾಯ ಕಾಯ್ದೆಯಲ್ಲಿನ ಅಧಿಕಾರವನ್ನು ಬಳಸಿಕೊಂಡು ಸೈಯದ್ ನಿಸಾರ್‌ಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿ ಹೊರಡಿಸಿದ್ದ ಆದೇಶವನ್ನೇ ರದ್ದು ಮಾಡಲು ತೀರ್ಮಾನಿಸಿದೆ.

ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳು ವಿಶೇಷ ಜಿಲ್ಲಾಧಿಕಾರಿಯ ವ್ಯಾಪ್ತಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್ ಅವರು ಸೈಯದ್ ನಿಸಾರ್ ಅವರಿಗೆ ನೀಡಿದ್ದ ಭೂ ಮಂಜೂರಾತಿ ಆದೇಶ ರದ್ದು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಮಂಜೂರಾತಿ ಆದೇಶ ರದ್ದು ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ.

ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ನಾಯಕ್, `ಸೈಯದ್ ನಿಸಾರ್ ಅವರಿಗೆ ನೀಡಿದ್ದ ಐದು ಎಕರೆ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅನುಮತಿ ಕೋರಲಾಗಿದೆ. ಅನುಮತಿ ದೊರೆತ ತಕ್ಷಣ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ಪ್ರಕ್ರಿಯೆ ಆರಂಭಿಸಲಾಗುವುದು~ ಎಂದರು.

ಮಂಜೂರಾತಿ ಆದೇಶ ರದ್ದು ಮಾಡುವುದು ಮೊದಲ ಹೆಜ್ಜೆ. ನಂತರ ಈ ಭೂಮಿಯನ್ನು ಅಪೋಲೊ ಆಸ್ಪತ್ರೆಗೆ ಮಾರುಕಟ್ಟೆ ದರದಲ್ಲಿ ನೀಡುವುದು, ಬಾಡಿಗೆ ಆಧಾರದಲ್ಲಿ ನೀಡುವುದು ಸೇರಿದಂತೆ ಕಾನೂನಿನ ಅಡಿಯಲ್ಲಿ ಲಭ್ಯವಿರುವ ಅವಕಾಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.