ADVERTISEMENT

ಮಂಜಪ್ಪ ಬಿ. ಹೊಸಮನಿ ವಜಾಗೆ ಆಗ್ರಹ

ಕೃಷ್ಣದೇವರಾಯ ವಿ.ವಿ ಕುಲಪತಿ ವಿರುದ್ಧ ಅವ್ಯವಹಾರದ ಆರೋಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಬೆಂಗಳೂರು: `ಹಲವು ಅಕ್ರಮಗಳಲ್ಲಿ ಭಾಗಿಯಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣ ಹಾಳುಮಾಡುತ್ತಿರುವ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಂಜಪ್ಪ ಬಿ. ಹೊಸಮನಿ ಅವರನ್ನು ಸರ್ಕಾರ ವಜಾಗೊಳಿಸಿ, ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು' ಎಂದು ಸಾಹಿತಿ ಪ್ರೊ.ಕೆ.ಮರುಳಸಿದ್ದಪ್ಪ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪ್ರೊ.ಮಂಜಪ್ಪ ಬಿ. ಹೊಸಮನಿ ವಿಶ್ವವಿದ್ಯಾಲಯದ ಕುಲಸಚಿವ ಕೆ.ವಿಜಯ ಕುಮಾರ್, ಕನ್ನಡ ವಿಭಾಗದ ಪ್ರಾಧ್ಯಾಪಕಿ ಮಲ್ಲಿಕಾ ಘಂಟಿ ಸೇರಿದಂತೆ ಹಲವರಿಗೆ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರೂ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದರು.

`ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಮಂಜಪ್ಪ ಅವರು ವಿಶ್ವವಿದ್ಯಾಲಯದ ಅನೇಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವಿನಾ ಕಾರಣ ಅಮಾನತು ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ತಮ್ಮ ಮೂಗಿನ ನೇರಕ್ಕೆ ನಡೆಯದ ಅಧಿಕಾರಿಗಳ ವಿರುದ್ಧ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಕವಿ ಎಲ್.ಹನುಮಂತಯ್ಯ ಮಾತನಾಡಿ, `ಜುಲೈ 29ರಂದು ಮಂಜಪ್ಪ ಮತ್ತು ಅವರ ಕಾರ್ ಚಾಲಕ ರೇವಣ್ಣ ಎಂಬುವರು ವಿಜಯಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ವಿಜಯಕುಮಾರ್ ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಡಿ ಮಂಜಪ್ಪ ಮತ್ತು ರೇವಣ್ಣ ಅವರನ್ನು ಬಂಧಿಸಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.