ADVERTISEMENT

`ಮಂತ್ರಿ' ಕಟ್ಟಡಕ್ಕೆ ನಕ್ಷೆ ಮಂಜೂರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:58 IST
Last Updated 18 ಏಪ್ರಿಲ್ 2013, 19:58 IST

ಬೆಂಗಳೂರು:  ಮಂತ್ರಿ ಡೆವೆಲಪರ್ಸ್‌ ಸಂಸ್ಥೆ ನಿರ್ಮಾಣದ ಯಾವುದೇ ಕಟ್ಟಡಗಳಿಗೆ ನಕ್ಷೆ ಮಂಜೂರು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಬಿಬಿಎಂಪಿ, ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಆ ಸಂಸ್ಥೆಯ ಸಹಭಾಗಿತ್ವದ ಮೆಟ್ರೊ ರೈಲು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಗುರುವಾರ ದಿಢೀರ್ ಆಗಿ ನಕ್ಷೆಯನ್ನು ಮಂಜೂರು ಮಾಡಿದೆ. ಈ ಸಂಬಂಧ ಹೈಕೋರ್ಟ್‌ಗೆ ವರದಿಯನ್ನೂ ನೀಡಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಮಂತ್ರಿ ಡೆವೆಲಪರ್ಸ್‌ ಸಹಯೋಗದಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು 5.04 ಎಕರೆ ಭೂಸ್ವಾಧೀನ ಮಾಡಿಕೊಂಡಿತ್ತು. ಈ ಸಂಬಂಧ ಎರಡೂ ಸಂಸ್ಥೆಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದವು.

ಮಂತ್ರಿ ಡೆವೆಲಪರ್ಸ್‌ ವಶದಲ್ಲಿದ್ದ ಈ ನಿವೇಶನದ ಮಾಲೀಕತ್ವ ಪ್ರಶ್ನಾರ್ಹವಾಗಿದೆ ಎಂಬುದು ಬಿಬಿಎಂಪಿ ವಾದವಾಗಿತ್ತು. ಈ ಭೂಮಿ ಮೂಲತಃ ಮೈಸೂರು ಸ್ಪಿನ್ನಿಂಗ್ ಅಂಡ್ ಮ್ಯಾನುಫಾಕ್ಚರಿಂಗ್ ಮಿಲ್ಸ್ ಸಂಸ್ಥೆಗೆ ಸೇರಿತ್ತು. ದಿವಾಳಿ ಎದ್ದ ಸ್ಪಿನ್ನಿಂಗ್ ಮಿಲ್‌ಗಳನ್ನು ವಶಪಡಿಸಿಕೊಳ್ಳಲು 1974ರಲ್ಲಿ ಹೊರಡಿಸಲಾದ ಕಾಯ್ದೆ ಮೂಲಕ ಕೇಂದ್ರ ಸರ್ಕಾರ ಈ ಭೂಮಿಯನ್ನು ತನ್ನ ಸ್ವಾಧೀನ ಮಾಡಿಕೊಂಡಿತ್ತು. ರಾಷ್ಟ್ರೀಯ ಜವಳಿ ಇಲಾಖೆ ಮೂಲಕ ಅದನ್ನು ಮಂತ್ರಿ ಡೆವೆಲಪರ್ಸ್‌ ಖರೀದಿ ಮಾಡಿತ್ತು.

ಮೆಟ್ರೊ ರೈಲು ನಿಲ್ದಾಣ ನಿರ್ಮಿಸಲು ಒಡಂಬಡಿಕೆ ಮಾಡಿಕೊಂಡ ಮೇಲೆ ನಕ್ಷೆ ಮಂಜೂರಾತಿಗಾಗಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಮಂತ್ರಿ ಡೆವೆಲಪರ್ಸ್‌ ಸಂಸ್ಥೆಯು ಈ ಹಿಂದೆ ಸಾರ್ವಜನಿಕ ರಸ್ತೆಯನ್ನು ಖಾಸಗಿ ರಸ್ತೆ ಎಂದು ಅರ್ಥೈಸಿ, ಅದೇ ಭೂಮಿಗೆ ಹೊಂದಿಕೊಂಡಿದ್ದ ಕೆರೆ ಪ್ರದೇಶ ಮತ್ತು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿದೆ ಎಂದು ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ದೂರಿದ್ದರು. ಪ್ರಕರಣದ ಸಮಗ್ರವಾದ ತನಿಖೆಗೆ ಆಯುಕ್ತರು ಸಮಿತಿಯೊಂದನ್ನು ರಚಿಸಿದ್ದರು.

ತನಿಖೆ ನಡೆಸಿದ್ದ ಸಮಿತಿ ಮಂತ್ರಿ ಡೆವೆಲಪರ್ಸ್‌ನಿಂದ 2 ಎಕರೆ 11 ಗುಂಟೆ ಜಾಗ ಅತಿಕ್ರಮಿಸಲಾಗಿದ್ದು, ಸಾರ್ವಜನಿಕರ ರಸ್ತೆಯನ್ನೇ ತೋರಿಸಿ, ರಸ್ತೆಗೆ ಜಾಗ ಬಿಡಲಾಗಿದೆ ಎಂಬ ತಪ್ಪು ಮಾಹಿತಿ ನೀಡಿದೆ ಎಂದು ವರದಿ ನೀಡಿತ್ತು. ಈ ಸಂಬಂಧ ನೋಟಿಸ್ ಜಾರಿ ಮಾಡಿದರೆ ಅದಕ್ಕೆ ಉತ್ತರ ಬಂದಿಲ್ಲ. ಹೀಗಾಗಿ ಆ ಸಂಸ್ಥೆಯಿಂದ ಬಂದ ನಕ್ಷೆಗೆ ಮಂಜೂರಾತಿ ನೀಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದರು. ಬಿಬಿಎಂಪಿ ತಾಳಿದ ಈ ಧೋರಣೆ ವಿರುದ್ಧ ಮಂತ್ರಿ ಡೆವೆಲಪರ್ಸ್‌ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರ ಮಟ್ಟದಲ್ಲೂ ಈ ಸಂಬಂಧ ಹಲವು ಸಭೆಗಳು ನಡೆದಿದ್ದವು.

ಹೈಕೋರ್ಟ್ ಆದೇಶಕ್ಕೆ ಬದ್ಧವಾಗಿರುವಂತೆ ಸೂಚಿಸಿ, ನಕ್ಷೆ ಮಂಜೂರು ಮಾಡುವಂತೆ ಸರ್ಕಾರ ಸೂಚಿಸಿತ್ತು. ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ಎಸ್. ಶಿವಶೈಲಂ, ಬಿಬಿಎಂಪಿ ಧೋರಣೆಯಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ಆಕ್ಷೇಪ ಎತ್ತಿದ್ದರು. ಮಂತ್ರಿ ಡೆವೆಲಪರ್ಸ್‌ ಸಂಸ್ಥೆ ಅತಿಕ್ರಮಣ ಮಾಡಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಾದಿಸಿದ್ದರು.

ಆ ಸಭೆಯಲ್ಲಿದ್ದ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಟಿ. ರಮೇಶ್ ಪಾಲ್ಗೊಂಡರೂ ಬಿಬಿಎಂಪಿ ನಿಲುವನ್ನು ಸಮರ್ಥಿಸಿಕೊಂಡಿರಲಿಲ್ಲ ಎಂದು ಈ ಸಂಬಂಧ ಸಿದ್ಧಪಡಿಸಲಾದ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟಾಗಿಯೂ ನಕ್ಷೆ ನೀಡದಿರುವ ತೀರ್ಮಾನಕ್ಕೆ ಬಿಬಿಎಂಪಿ ಅಂಟಿಕೊಂಡಿತ್ತು. ಆದರೆ, ಹೈಕೋರ್ಟ್ ಆದೇಶ ಅನಿವಾರ್ಯವಾಗಿ ನಕ್ಷೆಯನ್ನು ಮಂಜೂರು ಮಾಡುವಂತೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.