ADVERTISEMENT

ಮಂತ್ರಿ ಟೆಕ್‌ ಜೋನ್‌ ಎಂ.ಡಿ.ಗೆ ವಾರಂಟ್‌

ಎನ್‌ಜಿಟಿ ವಿಚಾರಣೆಗೆ ಗೈರು ಹಾಜರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಮಂತ್ರಿ ಟೆಕ್‌ ಜೋನ್‌ ಎಂ.ಡಿ.ಗೆ ವಾರಂಟ್‌
ಮಂತ್ರಿ ಟೆಕ್‌ ಜೋನ್‌ ಎಂ.ಡಿ.ಗೆ ವಾರಂಟ್‌   

ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆಯ ಬಫರ್ ವಲಯದ ನಿಯಮ ಉಲ್ಲಂಘಿಸಿದ ಪ್ರಕರಣದ ವಿಚಾರಣೆಗೆ ಹಾಜರಾಗದ ಮಂತ್ರಿ ಟೆಕ್‌ ಜೋನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸುಶೀಲ್‌ಕುಮಾರ್ ಮಂತ್ರಿ ಅವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಗುರುವಾರ ಜಾಮೀನು ಸಹಿತ ವಾರಂಟ್‌ ಹೊರಡಿಸಿದೆ.

ಬೆಳ್ಳಂದೂರು ಕೆರೆಯ ಬಫರ್ ವಲಯದ ನಿಯಮ ಉಲ್ಲಂಘಿಸಿಲ್ಲ ಎಂಬುದನ್ನು ಸಾಬೀತುಪಡಿಸಲು ಅನುಸರಣಾ ವರದಿ ಸಲ್ಲಿಸುವಲ್ಲಿ ವಿಳಂಬ ನೀತಿ ಅನುಸರಿಸಿದ್ದ ಮಂತ್ರಿ ಟೆಕ್‌ ಜೋನ್ ಸಂಸ್ಥೆಗೆ ಕಳೆದ ಮಾರ್ಚ್‌ 14ರಂದು ₹ 5 ಲಕ್ಷ ದಂಡ ವಿಧಿಸಿದ್ದ ಎನ್‌ಜಿಟಿ, ಮಾರ್ಚ್‌ 20ರಂದು ನಿಗದಿಯಾಗಿದ್ದ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿತ್ತು.

ಆದರೆ, ಮಾರ್ಚ್‌ 20ರಂದು ನಡೆದಿದ್ದ ವಿಚಾರಣೆಗೆ ಹಾಜರಾಗದಿರುವುದಕ್ಕೆ ಎನ್‌ಜಿಟಿ ಆದೇಶ ತಲುಪಿಲ್ಲ ಎಂಬ ಕಾರಣ ನೀಡಿದ್ದರಿಂದ, ಏಪ್ರಿಲ್‌ 5ಕ್ಕೆ ವಿಚಾರಣೆ ಮುಂದೂಡಿದ್ದ ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಪೀಠ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ₹ 5 ಲಕ್ಷ ದಂಡವನ್ನು ಪಾವತಿಸಿರುವ ರಸೀದಿಯೊಂದಿಗೆ ಜರಾಗುವಂತೆ
ಆದೇಶಿಸಿತ್ತು.

ADVERTISEMENT

ಗುರುವಾರ ಬೆಳಿಗ್ಗೆ ನಡೆದ ವಿಚಾರಣೆ ವೇಳೆ ಸುಶೀಲ್‌ಕುಮಾರ್‌ ಅವರ ಹಾಜರಾತಿಗೆ ವಿನಾಯಿತಿ ನೀಡುವಂತೆ ಅವರ ಪರ ವಕೀಲರು ಕೋರಿದರಾದರೂ, ಆ ಕುರಿತು ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದ್ದ ನ್ಯಾಯಪೀಠ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿತ್ತು. ನಂತರವೂ ಲಿಖಿತ ಮನವಿ ಸಲ್ಲಿಸದ್ದರಿಂದ ಜಾಮೀನು ಸಹಿತ ವಾರಂಟ್‌ ಜಾರಿ ಮಾಡಿ ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಮೇ 2ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.