ADVERTISEMENT

ಮಂದಿರದಲ್ಲೂ ಪಾದರಕ್ಷೆ ಹಾಕಬೇಕಾದೀತು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2012, 20:15 IST
Last Updated 4 ನವೆಂಬರ್ 2012, 20:15 IST

ಬೆಂಗಳೂರು: `ಭೂಮಿ ತಾಪಮಾನ ಯಾವ ರೀತಿಯಲ್ಲಿ ಏರುತ್ತಿದೆ ಎಂದರೆ ಮುಂದೊಂದು ದಿನ ಮಂದಿರದಲ್ಲೂ ಪಾದರಕ್ಷೆ ಹಾಕಿಕೊಂಡೇ ಹೋಗುವ ಸ್ಥಿತಿ ಬರುತ್ತದೆ~ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದರು.

ಹವಾಮಾನ ಬದಲಾವಣೆ ವಿಷಯವಾಗಿ ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯಲ್ಲಿ ಭಾನುವಾರ ನಡೆದ ಮೂರನೇ ರಾಷ್ಟ್ರೀಯ ಸಂಶೋಧನಾ ಸಮ್ಮೇಳನದಲ್ಲಿ ಈ ಅಭಿಪ್ರಾಯ ಕೇಳಿಬಂತು. ಐಐಎಸ್‌ಸಿ, ವಿಜ್ಞಾನ ಮತ್ತು ಪರಿಸರ ಕೇಂದ್ರ, ನವದೆಹಲಿ ಹಾಗೂ ಚೆನ್ನೈನ ಐಐಟಿಗಳು ಜೊತೆಯಾಗಿ ಈ ಸಮ್ಮೇಳನ ಏರ್ಪಡಿಸಿದ್ದವು.

`ನಗರ ಪ್ರದೇಶದಲ್ಲಿ ನಿತ್ಯವೂ ಲೋಡ್ ಶೆಡ್ಡಿಂಗ್ ಮಾಡಿದರೆ ತಾಪಮಾನವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು~ ಎಂದು ಪ್ರಬಂಧ ಮಂಡಿಸಿದ ಹಲವು ಸಂಶೋಧಕರು ಅಭಿಪ್ರಾಯಪಟ್ಟರು.

`ಜಾಗತಿಕವಾಗಿ ನಾವು ಈಗಾಗಲೇ 830 ಕೋಟಿ ಟನ್‌ಗಳಷ್ಟು ಇಂಗಾಲ ಉತ್ಪಾದಿಸಿ ವಾತಾವರಣಕ್ಕೆ ಕಳುಹಿಸಿದ್ದೇವೆ. ಅದರಲ್ಲಿ ಇಂಧನ ಉತ್ಪಾದನೆ ಕೊಡುಗೆಯೇ ಶೇ 40ರಷ್ಟಿದೆ. ಇಂಧನ ಬಳಕೆ ಕಡಿಮೆ ಮಾಡಿದಷ್ಟೂ ಇಂಗಾಲದ ಪ್ರಮಾಣ ಕಡಿಮೆಯಾಗಲಿದೆ~ ಎಂದು ತೇಜಲ್ ಕಾನಿಟ್ಕರ್ ವಿವರಿಸಿದರು.

ನಗರಗಳ ಹಸರೀಕರಣದ ವಿಷಯವಾಗಿ ಮಾತನಾಡಿದ ಹರಿಣಿ ನಾಗೇಂದ್ರ, `ಬೆಂಗಳೂರಿನ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಹಸಿರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಹೊಸ ಬಡಾವಣೆಗಳಲ್ಲಿ ಮರ ಬೆಳೆಸಬೇಕೆಂಬ ಸರ್ಕಾರಿ ನಿಯಮ ಪಾಲನೆ ಆಗುತ್ತಿಲ್ಲ. ಇಂಗಾಲದ ಪ್ರಮಾಣ ಕಡಿಮೆ ಮಾಡಲು ಹೆಚ್ಚು ಮರಗಳನ್ನು ಬೆಳೆಸಬೇಕಿದೆ~ ಎಂದರು.

`ಭತ್ತದ ಬೆಳೆಯಲ್ಲಿ ಇಂಗಾಲದ ಹೆಜ್ಜೆ ಗುರುತುಗಳು~ ವಿಷಯವಾಗಿ ಪ್ರಬಂಧ ಮಂಡಿಸಿದ ದಿವ್ಯಾ ಪಾಂಡೆ, `ಭಾರತದಲ್ಲಿ ಭತ್ತವನ್ನು ಭಾರಿ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಅದಕ್ಕಾಗಿ ಸಿಕ್ಕಾಪಟ್ಟೆ ರಾಸಾಯನಿಕವನ್ನು ಸುರಿಯಲಾಗುತ್ತಿದೆ. ಅದು ಹೊರಹಾಕುವ ಅನಿಲ ಭೂಮಿಯ ತಾಪಮಾನಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ~ ಎಂದು ತಿಳಿಸಿದರು.

ಹಿಪ್ಪು ಸಾಕ್ ಕ್ರಿಸಲ್ ನಾಥನ್ ಮಾತನಾಡಿ, `ನಗರ ಮತ್ತು ಗ್ರಾಮೀಣ ಭಾಗದ ಮಧ್ಯೆ ಕಂದರ ಹೆಚ್ಚುತ್ತಿದ್ದು ಎಲ್ಲರೂ ನಗರ ಪ್ರದೇಶದ ಕಡೆ ವಲಸೆ ಬರುತ್ತಿದ್ದಾರೆ. ಸಾರಿಗೆಯೂ ಸೇರಿದಂತೆ ಅವರಿಗೆ ಬೇಕಾದ ಎಲ್ಲ ಸೌಕರ್ಯ ಕಲ್ಪಿಸಲು ಇಂಧನ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ವ್ಯಯಿಸಲಾಗುತ್ತದೆ. ಇದರಿಂದ ಇಂಗಾಲದ ಪ್ರಮಾಣ ಹೆಚ್ಚುತ್ತಿದೆ~ ಎಂದು ವಿವರಿಸಿದರು.

ಎರಡು ದಿನಗಳ ಸಮ್ಮೇಳನ ಭಾನುವಾರ ಸಂಜೆ ಸಮಾರೋಪಗೊಂಡಿತು. ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಂಶೋಧಕರು ಪಾಲ್ಗೊಂಡಿದ್ದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.