ADVERTISEMENT

ಮಕರ ಸಂಕ್ರಾಂತಿ; ಮನೆ ಮನೆಗೆ ಕಾಂತಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 8:45 IST
Last Updated 16 ಜನವರಿ 2011, 8:45 IST
ಮಕರ ಸಂಕ್ರಾಂತಿ; ಮನೆ ಮನೆಗೆ ಕಾಂತಿ
ಮಕರ ಸಂಕ್ರಾಂತಿ; ಮನೆ ಮನೆಗೆ ಕಾಂತಿ   

ಬೆಂಗಳೂರು: ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುವ ಹೊಸ ವರ್ಷದ ಮೊದಲ ಧಾರ್ಮಿಕ ಹಬ್ಬ ‘ಮಕರ ಸಂಕ್ರಾಂತಿ’ಯನ್ನು ನಗರದಲ್ಲಿ ಬೆಲೆ ಏರಿಕೆಯ ಮಧ್ಯೆಯೇ ಶನಿವಾರ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಆಯೋಜಿಸಲಾಗಿತ್ತು. ಅದರಲ್ಲೂ ಪ್ರಮುಖವಾಗಿ ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಜೆ 5.25ಕ್ಕೆ ಸೂರ್ಯ ರಶ್ಮಿಗಳು ಗರ್ಭಗುಡಿಯ ಶಿವಲಿಂಗದ ಮೇಲೆ ಬಿದ್ದವು. ಈ ದೃಶ್ಯ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿದ್ದ ಭಕ್ತರು ಸಾಲುಗಟ್ಟಿ ನಿಂತಿದ್ದರು. ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರ ಅನುಕೂಲಕ್ಕಾಗಿ ಈ ದೃಶ್ಯವನ್ನು ದೇವಾಲಯದ ಹೊರಭಾಗದಲ್ಲಿ ಟಿವಿ ಪರದೆ ಮೂಲಕ ತೋರಿಸುವ ವ್ಯವಸ್ಥೆ ಮಾಡಿತ್ತು.

ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ತರಕಾರಿಗಳ ಜೊತೆಗೇ ಕಬ್ಬು, ಹೂ-ಹಣ್ಣುಗಳು ಹಾಗೂ ಎಳ್ಳು-ಬೆಲ್ಲದ ಪಾಕೆಟ್‌ಗಳನ್ನು ಮಾರಾಟಕ್ಕಿಡಲಾಗಿತ್ತು.ಗೋವುಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ಹಲವು ಕಡೆ ನಡೆದ ಕಾರ್ಯಕ್ರಮಗಳಲ್ಲೂ ವಿಶೇಷವಾಗಿ ಮಹಿಳೆಯರು ಪರಸ್ಪರ ‘ಎಳ್ಳು-ಬೆಲ್ಲ ಹಂಚಿಕೊಂಡು ಒಳ್ಳೆಯವರಾಗಿ ಇರೋಣ’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ನಿಮಿತ್ತ ಬಹುತೇಕ ಕಚೇರಿಗಳಿಗೆ ರಜೆ ಘೋಷಿಸಿದ್ದರಿಂದ ನಗರದ ಹಲವು ರಸ್ತೆಗಳು ಬೆಳಿಗ್ಗೆಯಿಂದ ಬಿಕೋ ಎನ್ನುತ್ತಿದ್ದವು.ನಗರದ ಕೆಲವು ಹೋಟೆಲ್‌ಗಳು ಬಾಳೆ ದಿಂಡು, ತಳಿರು-ತೋರಣಗಳಿಂದ ತಮ್ಮ ಹೋಟೆಲ್‌ಗಳನ್ನು ಶೃಂಗರಿಸಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಜೊತೆಗೆ ಸಂಕ್ರಾಂತಿಯ ವಿಶೇಷ ಊಟವನ್ನೂ ತಮ್ಮ ಗ್ರಾಹಕರಿಗೆ ಉಣಬಡಿಸಿದವು.

ಹಬ್ಬದ ನಿಮಿತ್ತ ಮಲ್ಲೇಶ್ವರ ಮೈದಾನದಲ್ಲಿ ಅಗ್ನಿಯಲ್ಲಿ ಎತ್ತುಗಳನ್ನು ಹಾಯಿಸುವ ಸಾಹಸದ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.ನಗರದ ಆಂಜನಪ್ಪ ಗಾರ್ಡನ್‌ನ ಚೆಲುವಾದಿ ಪಾಳ್ಯ ಸೇರಿದಂತೆ ವಿವಿಧೆಡೆ ಗ್ರಾಮೀಣ ಹಿನ್ನೆಲೆಯಿಂದ ಬಂದಿರುವವರು ವಾಸಿಸುವ ಬಡಾವಣೆಗಳಲ್ಲಿ ಸಾಂಪ್ರದಾಯಿಕ ಪೊಂಗಲ್ ಸಿಹಿಯನ್ನು ಬಯಲಿನಲ್ಲಿಯೇ ತಯಾರಿಸಿ ಹಂಚಲಾಯಿತು. ಪೊಂಗಲ್ ಸವಿದ ನಾರಿಯರು ಜಾನಪದ ನೃತ್ಯಕ್ಕೆ ಹೆಜ್ಜೆಗಳನ್ನೂ ಹಾಕಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.