ADVERTISEMENT

ಮಕ್ಕಳಿಗೂ ಧರ್ಮ ಜ್ಞಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST
ಮಕ್ಕಳಿಗೂ ಧರ್ಮ ಜ್ಞಾನ ಅಗತ್ಯ
ಮಕ್ಕಳಿಗೂ ಧರ್ಮ ಜ್ಞಾನ ಅಗತ್ಯ   

ಬೆಂಗಳೂರು: `ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಧರ್ಮ ಜ್ಞಾನ ಪಡೆಯಬೇಕು ಹಾಗೂ ಉತ್ತಮ ವಿಚಾರಗಳನ್ನು ತಿಳಿಯಬೇಕು. ಪ್ರತಿಯೊಬ್ಬ ವ್ಯಕ್ತಿ ಧರ್ಮದ ಕಡೆಗೆ ಲಕ್ಷ್ಯ ನೀಡಬೇಕು~ ಎಂದು 108 ಮುನಿಶ್ರೀ ಪುಣ್ಯಸಾಗರಜಿ ಮಹಾರಾಜರು ಕಿವಿಮಾತು ಹೇಳಿದರು.

ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ ಆಶ್ರಯದಲ್ಲಿ ನಗರದ ಕರ್ನಾಟಕ ಜೈನ ಭವನದಲ್ಲಿ ಭಾನುವಾರ ನಡೆದ ಟ್ರಸ್ಟ್‌ನ 24ನೇ ವಾರ್ಷಿಕೋತ್ಸವ, `ಸಿರಿಭೂವಲಯದ ಒಳನೋಟ~ ಕೃತಿ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

`ಇತ್ತೀಚಿನ ವರ್ಷಗಳಲ್ಲಿ ಮನುಷ್ಯನಿಗೆ ಧರ್ಮದ ಒಲವು ಕಡಿಮೆಯಾಗಿದೆ ಹಾಗೂ ಅಜ್ಞಾನ ತುಂಬಿದೆ. ಯಾವತ್ತೂ ಯಾವ ಕಾರಣಕ್ಕೂ ಧರ್ಮಕ್ಕೆ ಅಪಚಾರ ಎಸಗಬಾರದು. ಮನುಷ್ಯನ ಆತ್ಮದಲ್ಲೇ ಧರ್ಮ ಇದೆ~ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, `ದೇಶದಲ್ಲಿ ಬೌದ್ಧ ಹಾಗೂ ಜೈನ ಧರ್ಮದವರು ನೀಡಿರುವ ಕಥೆಗಳು ವಿಶಿಷ್ಟವಾದುದು. ಬೌದ್ಧರು ಹಾಗೂ ಜೈನರು ಜಗತ್ತಿನ ಶ್ರೇಷ್ಠ ಕಥೆಗಾರರು ಎಂಬ ಸತ್ಯವನ್ನು ಪಂಡಿತರು ಹಾಗೂ ಜ್ಞಾನಿಗಳು ಹೇಳಿದ್ದಾರೆ. ಜೈನ ಕಥಾ ಪ್ರಪಂಚ ದೊಡ್ಡದು~ ಎಂದರು.

`ಜೈನ ಮುನಿ ಕುಮುದೇಂದು ಮುನಿಗಳು ಬರೆದ ಸಿರಿಭೂವಲಯ ಕೃತಿಗೆ ಚೌಕಟ್ಟು ರೂಪಿಸಿದವರು ಯಲ್ಲಪ್ಪ ಶಾಸ್ತ್ರಿಗಳು. ಸಿರಿಭೂವಲಯದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನ ಆಗಿಲ್ಲ. ಇದರ ಬಗ್ಗೆ ಬಲ್ಲವರನ್ನು ಕಂಡು ಅಧ್ಯಯನ ಮಾಡಿ ಈ ಕೃತಿಯ ಆಯಾಮ, ಅನನ್ಯತೆ ಹಾಗೂ ಮಹತ್ವದ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಬೇಕು~ ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸುಧಾರ್ಥಿ ಹಾಸನ ಅವರ `ಸಿರಿಭೂವಲಯದ ಒಳನೋಟ~, ಎ.ಶಾಂತಿರಾಜಶಾಸ್ತ್ರಿ ಸಂಪಾದಕತ್ವದ `ಸಮ್ಯಕ್ತ್ವ ಕೌಮುದಿ~ ಕೃತಿಯ ಮರುಮುದ್ರಣ, `ರತ್ನಕರಂಡಕ ಶ್ರಾವಕಾಚಾರ~, `ಪಂಚಸ್ತೋತ್ರ ಭಾವಪ್ರಕಾಶಿಕಾ~ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್ ಮುಖ್ಯಸ್ಥ ಎಸ್.ನಾಗಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಿಐಡಿ ಡಿವೈಎಸ್‌ಪಿ ಎಚ್.ಎ.ತೀರ್ಥರಾಜು, ಗುಪ್ತವಾರ್ತೆಯ ಡಿವೈಎಸ್‌ಪಿ ಎಚ್.ಕೆ.  ರಮೇಶ್ ಕುಮಾರ್, ಟ್ರಸ್ಟಿನ ವ್ಯವಸ್ಥಾಪಕ ಧರ್ಮದರ್ಶಿ ಎಸ್.ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.