ADVERTISEMENT

ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರ ಕಲಿಸಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:35 IST
Last Updated 27 ಅಕ್ಟೋಬರ್ 2011, 19:35 IST

ಬೆಂಗಳೂರು: ಹಳ್ಳಿಕಾರರ ಸಂಘವು ಜಯನಗರ 4ನೇ ಬ್ಲಾಕ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಪೂರ್ಣಿಮಾ ಕನ್ವೆನ್ಷನ್ ಸೆಂಟರ್‌ನ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, `ಭಕ್ತಿ, ಶ್ರದ್ಧೆ, ಆಚಾರ- ವಿಚಾರ, ಸಂಸ್ಕಾರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕಂದಿನಲ್ಲೇ ಸಂಸ್ಕಾರಗಳನ್ನು ಕಲಿಸಬೇಕು. ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ~ ಎಂದರು.

`ಯುವ ಜನತೆ ಸಮಾಜ ಸೇವಾ ಕಾರ್ಯಗಳಿಗೆ ಕೆಲ ಸಮಯವನ್ನು ಮೀಸಲಿಡಬೇಕು. ಉಳ್ಳವರು ಇಲ್ಲದವರಿಗೆ ಅಗತ್ಯ ನೆರವು ನೀಡಬೇಕು. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಆಗಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ~ ಎಂದು ಹೇಳಿದರು.

ಸಮಾರಂಭವನ್ನು ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಕೆ.ಎಂ. ನಾಗರಾಜ್, `ಹಳ್ಳಿಕಾರರ ಸಂಘವು ಜನಾಂಗದವರನ್ನು ಸಂಘಟಿಸಿ ನೂತನ ಸಮುದಾಯ ಭವನ ನಿರ್ಮಿಸಿರುವುದು ನಿಜಕ್ಕೂ ಮಹತ್ವದ್ದಾಗಿದೆ. ಸುಮಾರು 70 ವರ್ಷಗಳ ನಂತರ ಸಂಘವು ಈ ಪ್ರಯತ್ನಕ್ಕೆ ಮುಂದಾಗಿರುವುದು ಉತ್ತಮವಾಗಿದೆ. ಜನಾಂಗದ ಜನರ ಕಲ್ಯಾಣಕ್ಕೆ ಸಂಘ ಅಗತ್ಯ ಸಹಕಾರ ನೀಡಲಿ~ ಎಂದರು.

ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಶಾಸಕರಾದ ಡಾ.ಡಿ.ಹೇಮಚಂದ್ರ ಸಾಗರ್, ಬಿ.ಎನ್. ವಿಜಯಕುಮಾರ್, ರಾಮಲಿಂಗಾರೆಡ್ಡಿ, ಪ್ರಿಯಕೃಷ್ಣ, ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಿಬಿಎಂಪಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ, ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್. ರಾಮಚಂದ್ರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.