ADVERTISEMENT

ಮಕ್ಕಳ ಚಲನಚಿತ್ರೋತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಬೆಂಗಳೂರು: ನಗರದ ವಿವಿಧ ಚಿತ್ರಮಂದಿರಗಳಲ್ಲಿ ಜ.9ರಿಂದ ಆಯೋಜಿಸಿದ್ದ ಏಳನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಕಬ್ಬನ್ ಉದ್ಯಾನದಲ್ಲಿರುವ ಬಾಲಭವನದಲ್ಲಿ ಶುಕ್ರವಾರ ತೆರೆ ಬಿತ್ತು.

ಬಿಡದಿಯ ಜ್ಞಾನ ವಿಕಾಸ ಟ್ರಸ್ಟ್‌ನ ಮಕ್ಕಳು ಜಾನಪದ ನೃತ್ಯ ವೈಭವವನ್ನು ಪ್ರದರ್ಶಿಸುವ ಮೂಲಕ ಆರಂಭಗೊಂಡ ಸಮಾರೋಪ ಸಮಾರಂಭದಲ್ಲಿ ಚಿತ್ರೋತ್ಸವದ ಆಯೋಜಕ ಸಂಸ್ಥೆ `ಚಿಲ್ಡ್ರನ್ಸ್ ಇಂಡಿಯಾ~ವು ಏಳು ವರ್ಷಗಳಿಂದ ನಡೆಸುತ್ತಾ ಬಂದಿರುವ ಉತ್ಸವದ ಸಮಗ್ರ ಮಾಹಿತಿಯನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ನಮ್ಮ  ಜೋಡಿ ಕುಂತ ಏನ್ ನೋಡ್ತಾವೋ ಅದ್ನ ಮಕ್ಕಳು ಕಲಿತಾವು. ಹಂಗಾಗದ ಮಕ್ಕಳ ಸಂಬಂಧನ ಬ್ಯಾರೆ ಸಿನಿಮಾ ಮಾಡ್ಬೇಕ. ಇದರ ಸಲುವಾಗಿ ಕನ್ನಡ ಚಿತ್ರೋದ್ಯಮ ನಿರ್ದಿಷ್ಟ ಗುರಿ ಇಟ್ಕೋಬೇಕಾಗೈತಿ~ ಎಂದು ಹೇಳಿದರು.

ಉಪಮೇಯರ್ ಎಸ್.ಹರೀಶ್,`ಮುಂದಿನ ದಿನಗಳಲ್ಲಿ ನಗರದಲ್ಲಿ ಆಯೋಜಿಸಲಿರುವ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಪಾಲಿಕೆ ವತಿಯಿಂದ ಧನಸಹಾಯ ಮಾಡಲಾಗುವುದು~ ಎಂದು ಭರವಸೆ ನೀಡಿದರು.

ಇದೇ ವೇಳೆ ಕನ್ನಡದ  `ಹೆಜ್ಜೆಗಳು~, `ಬರ್ಡ್ಸ್ ಸಾಂಗ್ಸ್~ ( ಉತ್ತಮ ಚಿತ್ರ ), ` ಇನ್ ಹಾರ್ಟ್ ಬೀಟ್~ ಮತ್ತು `ಮಿಸ್ ಅಲೈಸ್ ಗೋಮ್~ (ಉತ್ತಮ ಕಿರುಚಿತ್ರ), `ದಿ ಸೌಂಡ್ ಆಫ್ ಮೈ ಫೂಟ್~ (ಉತ್ತಮ ನಿರ್ದೇಶನ)ಚಿತ್ರಗಳಿಗೆ ಪ್ರಶಸ್ತಿ ನೀಡಲಾಯಿತು. `ದಿ ಸೌಂಡ್ ಆಫ್ ಮೈ ಫೂಟ್~ ಚಿತ್ರದಲ್ಲಿ ನಟಿಸಿದ ಡೇನಿಯಲ್ ಅವರಿಗೆ `ಉತ್ತಮ ಬಾಲನಟ~ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರರಂಗದ ತಾರಾ, ಎಸ್.ಕೆ.ಭಗವಾನ್, ರಘು ಮುಖರ್ಜಿ, ಮರಿನಾ ಮಾಂಗೋ ಇತರರು ಉಪಸ್ಥಿತರಿದ್ದರು.  

`ನೀರಸ ಪ್ರತಿಕ್ರಿಯೆ ಆರೋಪಕ್ಕೆ ಹುರುಳಿಲ್ಲ~
ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಆರ್.ನಂಜುಡೇಗೌಡ ಮಾತನಾಡಿ, `ಚಿತ್ರೋತ್ಸವಕ್ಕೆ ಮಕ್ಕಳಿಂದ ನೀರಸ ಪ್ರತಿಕ್ರಿಯೆ ದೊರೆತಿದೆ ಎಂಬುದು ಸುಳ್ಳು. ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿರುವ ಮಕ್ಕಳ ಸಂಖ್ಯೆಯ ಬಗ್ಗೆ ನನ್ನಲ್ಲಿ ಸಂಪೂರ್ಣ ದಾಖಲೆಗಳಿವೆ. ಈ ಬಗ್ಗೆ ಅನುಮಾನವಿದ್ದವರೂ ಪರಿಶೀಲಿಸಬಹುದು~ ಎಂದು ಹೇಳಿದರು.

ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯು ಸ್ಥಾಪನೆಯಾದ ನಂತರ ಚಿತ್ರೋತ್ಸವ ಹಮ್ಮಿಕೊಳ್ಳುವುದು ಸೇರಿದಂತೆ  ಹಲವು ವಿಚಾರದಲ್ಲಿ ಗೊಂದಲ ಉಂಟಾಗಿದೆ. ಚಿತ್ರೋತ್ಸವವನ್ನು ಜಂಟಿಯಾಗಿ ಆಯೋಜಿಸಿರುವುದರ ಕುರಿತು ಚಲನಚಿತ್ರ ಅಕಾಡೆಮಿಯೊಂದಿಗೆ ಪತ್ರ ವ್ಯವಹಾರ ನಡೆಸಲಾಯಿತು. ಆದರೆ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ~ ಎಂದು ಹೇಳಿದ ಅವರು, `ಮುಂದಿನ ದಿನಗಳಲ್ಲೂ ಉತ್ಸವ ಹಮ್ಮಿಕೊಳ್ಳುವುದನ್ನು ಮುಂದುವರಿಸಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.