ADVERTISEMENT

ಮಠದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಬೆಂಗಳೂರು: ‘ನಗರದ ಹೊರ ವಲಯದ ಹುಣಸಮಾರನಹಳ್ಳಿಯಲ್ಲಿರುವ ಶ್ರೀಮದ್ ದೇವಣಾಪುರ ದೇವ ಸಿಂಹಾಸನ ಸಂಸ್ಥಾನ ಮಠದ ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಅವರು ಅನೈತಿಕ ಸಂಬಂಧದಿಂದ ತಮಗೆ ಹುಟ್ಟಿದ ಮಗನನ್ನು ಪೀಠಾಧಿಪತಿ ಮಾಡಲು ಯತ್ನಿಸಿದ್ದಾರೆ’ ಎಂದು ಆರೋಪಿಸಿ ನೂರಾರು ಭಕ್ತರು ಮಠದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸ್ವಾಮೀಜಿ ಅವರು ಪೀಠಾಧಿಪತಿ ಆಯ್ಕೆಯನ್ನು ಕ್ರಮಬದ್ಧವಾಗಿಯೇ ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಚದುರಿದರು.
ಮಠದ ಮುಂದೆ ಜಮಾಯಿಸಿದ ನೂರಾರು ಗ್ರಾಮಸ್ಥರು ಸ್ವಾಮೀಜಿ ವಿರುದ್ಧ ಘೋಷಣೆ ಕೂಗಿದರು. ಪೀಠಕ್ಕೆ ಯೋಗ್ಯರನ್ನು ಆಯ್ಕೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಸಂಪ್ರದಾಯ ಮತ್ತು ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದರು.

‘ಮಠದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಅವರ ಪತ್ನಿಯ ಜತೆ ಸ್ವಾಮೀಜಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಆ ಸಂಬಂಧದಿಂದ ಜನಿಸಿದ ಮಗನನ್ನು ಅವರು ಪೀಠಾಧಿಪತಿ ಮಾಡಲು ಯತ್ನಿಸುತ್ತಿದ್ದಾರೆ. ಆ ಮೂಲಕ ಅವರು ಮಠದ ಘನತೆಯನ್ನು ಮಣ್ಣಪಾಲು ಮಾಡುತ್ತಿದ್ದಾರೆ’ ಎಂದು ಹುಣಸಮಾರನಹಳ್ಳಿಯ ವಾಸಿ ಮತ್ತು ಮಠದ ಭಕ್ತ ಬಿ.ವಿಶ್ವನಾಥ ದೂರಿದರು.

‘ಪರ್ವತರಾಜ ಶಿವಾಚಾರ್ಯ ಸ್ವಾಮೀಜಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ಮಠವನ್ನು ಮುನ್ನಡೆಸಲು ಯೋಗ್ಯ ಪೀಠಾಧಿಪತಿಯನ್ನು ಆಯ್ಕೆ ಮಾಡಬೇಕು. ಜನರ ಅಭಿಪ್ರಾಯಕ್ಕೆ ವಿರೋಧವಾಗಿ ನಡೆದುಕೊಂಡರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದರು. ನೂರಾರು ಗ್ರಾಮಸ್ಥರು ಮಠದ ಎದುರು ಜಮಾಯಿಸಿದ್ದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.