ADVERTISEMENT

ಮತದಾನದ ಮಹತ್ವ: ಬೀದಿ ನಾಟಕ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:37 IST
Last Updated 20 ಏಪ್ರಿಲ್ 2013, 19:37 IST

ಬೆಂಗಳೂರು: ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲು ಬಿಬಿಎಂಪಿ ವಿವಿಧ ಕಲಾ ತಂಡಗಳಿಂದ ಬೀದಿ ನಾಟಕ ಅಭಿಯಾನ ಆರಂಭಿಸಿದೆ. ಈ ಜಾಥಾಕ್ಕೆ ಬಿಬಿಎಂಪಿ ಆವರಣದಲ್ಲಿ ನಗರ ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಿದ್ದಯ್ಯ ಶುಕ್ರವಾರ ಚಾಲನೆ ನೀಡಿದರು.

ಸಭೆ: ನಗರ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೀಕ್ಷಕರ ಮೊದಲ ಸಭೆ ವಿಧಾನಸೌಧದ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಸಭೆ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಬಂದೋಬಸ್ತ್‌ಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಸಭೆಗೆ ನೀಡಿದರು. ಹೆಚ್ಚುವರಿ ಚುನಾವಣಾಧಿಕಾರಿಗಳಾದ ಪೊನ್ನುರಾಜ್, ಬಿ.ಬಿ. ಕಾವೇರಿ, ಡಾ. ಕೆ.ವಿ. ತ್ರಿಲೋಕಚಂದ್ರ, ಹೀರಾ ನಾಯಕ್ ಹಾಗೂ ಡಾ. ಆರ್. ವಿಶಾಲ್ ಹಾಜರಿದ್ದರು.

ಮೊಬೈಲ್ ಸಂದೇಶ: ಎಚ್ಚರಿಕೆ
ಚುನಾವಣಾ ಪ್ರಚಾರಕ್ಕಾಗಿ ಕೆಲ ಅಭ್ಯರ್ಥಿಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಮತಯಾಚನೆ ಸಂದೇಶಗಳನ್ನು ರವಾನಿಸುತ್ತಿರುವುದು ಕಂಡುಬಂದಿದೆ.  ಚುನಾವಣಾ ಕಚೇರಿಯ ಅನುಮತಿ ಪಡೆಯದೇ ಚುನಾವಣಾ ಸಂದೇಶ ರವಾನಿಸುವುದು ಕಾನೂನು ಬಾಹಿರವಾಗಿದೆ.

ಇಂತಹ ಸಂದೇಶಗಳು ಬಂದಾಗ ರಾಜ್ಯ ಚುನಾವಣಾ ಕಚೇರಿಯ ಶುಲ್ಕರಹಿತ ದೂರವಾಣಿ ಸಂಖ್ಯೆ: 1950 ಅಥವಾ ಬಿಬಿಎಂಪಿ ಚುನಾವಣಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 080-22270148 ಗೆ ಕರೆ ಮಾಡಿ ತಿಳಿಸಬೇಕು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.