ADVERTISEMENT

ಮತದಾರರ ಪಾತ್ರ ಮಹತ್ವದ್ದು

ನಿವೃತ್ತ ನ್ಯಾ. ಎಂ.ಎನ್‌. ಡವೆಂಕಟಾಚಲಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ಕೃಷಿ ತಾಂತ್ರಿ ಸಂಸ್ಥೆಯ ಸಭಾಂಗಣದಲ್ಲಿ ಪ್ರಜಾ ಜಾಗೃತಿ ಸಮಿತಿ ಭಾನುವಾರ ಏರ್ಪಡಿಸಿದ್ದ ‘ಚುನಾವಣೆಯ ಶುಧ್ಧತೆ–ಕುಸಿತ ಮತ್ತು ಚಿಕಿತ್ಸೆ’ಕುರಿತ ಸಂವಾದದಲ್ಲಿ ಜೆಸ್ಟೀಸ್ ಎಂ.ಎನ್.ವೆಂಕಟಚಲಯ್ಯ ಅವರು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರೊಂದಿಗೆ ಸಮಾಲೋಚನೆ ನಡೆಸಿದರು.ವಿನುತ ಮೂಲ, ಶಶಿಕಲಾ, ಹಿರಿಯ ವಕೀಲ ಶಂಕರಪ್ಪ ಇದ್ದರು–ಪ್ರಜಾವಾಣಿ ಚಿತ್ರ
ಕೃಷಿ ತಾಂತ್ರಿ ಸಂಸ್ಥೆಯ ಸಭಾಂಗಣದಲ್ಲಿ ಪ್ರಜಾ ಜಾಗೃತಿ ಸಮಿತಿ ಭಾನುವಾರ ಏರ್ಪಡಿಸಿದ್ದ ‘ಚುನಾವಣೆಯ ಶುಧ್ಧತೆ–ಕುಸಿತ ಮತ್ತು ಚಿಕಿತ್ಸೆ’ಕುರಿತ ಸಂವಾದದಲ್ಲಿ ಜೆಸ್ಟೀಸ್ ಎಂ.ಎನ್.ವೆಂಕಟಚಲಯ್ಯ ಅವರು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರೊಂದಿಗೆ ಸಮಾಲೋಚನೆ ನಡೆಸಿದರು.ವಿನುತ ಮೂಲ, ಶಶಿಕಲಾ, ಹಿರಿಯ ವಕೀಲ ಶಂಕರಪ್ಪ ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಚುನಾವಣೆಯಲ್ಲಿ ಪರಿಶುದ್ಧತೆಯನ್ನು ಕಾಪಾಡಬೇಕಾದರೆ ಅಭ್ಯರ್ಥಿಗಳದ್ದಷ್ಟೇ ಅಲ್ಲ ಮತದಾರರ ಪಾತ್ರವೂ ಅಷ್ಟೇ ಮಹತ್ವದ್ದು. ಮತದಾರರು ಜಾಗೃತರಾದರೆ ಚುನಾವಣಾ ಪ್ರಕ್ರಿಯೆಯ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ಪ್ರಜಾ ಜಾಗೃತಿ ಸಮಿತಿ ಭಾನುವಾರ ಇಲ್ಲಿ ಆಯೋಜಿಸಿದ್ದ ‘ಚುನಾವಣೆಯ ಶುದ್ಧತೆ– ಕುಸಿತ ಮತ್ತು ಚಿಕಿತ್ಸೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೆ ಚುನಾವಣೆಗಳಲ್ಲಿ ರಾಜಕೀಯ ನಾಯಕರು ಹಣದ ದುರುಪಯೋಗ ಮಾಡುತ್ತಿದ್ದರು. ಆದರೆ, ಈಗ ಜಾತಿ, ಸಮುದಾಯದ ಶಕ್ತಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಈ ದುಃಸ್ಥಿತಿಗೆ ನಾವೇ ಕಾರಣ. ಸರ್ಕಾರ ಅಥವಾ ರಾಜಕಾರಣಿಗಳನ್ನು ದೂಷಿಸಿ ಪ್ರಯೋಜನವಿಲ್ಲ’ ಎಂದರು.

ADVERTISEMENT

ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಮಾತನಾಡಿ, ‘ಸುಪ್ರೀಂ ಕೋರ್ಟ್‌ನ ಆದೇಶಗಳಿಗೆ ಕೇಂದ್ರ ಸರ್ಕಾರ ಗೌರವ ನೀಡುತ್ತಿಲ್ಲ. ಚುನಾವಣೆಗೆ ಸಂಬಂಧಿಸಿದ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ವರ್ಗೀಕರಿಸುತ್ತಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರನ್ನೂ ಗೌರವಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಕೇಂದ್ರ‌ವು ನಗದುರಹಿತ ವ್ಯವಹಾರಗಳನ್ನು ಉತ್ತೇಜಿಸುತ್ತಿದೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳು ಹಾಗೂ ನಾಯಕರಿಗೆ ನಗದುರಹಿತ ವ್ಯವಹಾರವನ್ನು ಕಡ್ಡಾಯಗೊಳಿಸಬೇಕಿದೆ’ ಎಂದರು. 

‘ಅಭ್ಯರ್ಥಿ ನಾಮಪತ್ರ ಸಲ್ಲಿಸಿದಾಗಲೇ ಚುನಾವಣಾ ಆಯೋಗ ಅವರ ಹಿನ್ನೆಲೆ ಹಾಗೂ ಆಸ್ತಿ ದಾಖಲೆಗಳನ್ನು ಪರಿಶೀಲಿಸಬೇಕು. ಆಯೋಗ ತನ್ನ ಕೆಲಸವನ್ನು ಸರಿಯಾಗಿ ಮಾಡಿದರೆ ಅಪರಾಧದ ಹಿನ್ನೆಲೆ ಉಳ್ಳವರು ಅಧಿಕಾರಕ್ಕೆ ಬರುವುದನ್ನು ತಡೆಯಬಹುದು’ ಎಂದು ಕನ್ನಡಿಗರ ಉದ್ಯೋಗ ವೇದಿಕೆ ಅಧ್ಯಕ್ಷೆ ವಿನುತಾ ಮೂಲ ಅಭಿಪ್ರಾಯಪಟ್ಟರು.

‘ಉಚಿತ ಶಿಕ್ಷಣ, ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಹಾಗೂ ವ್ಯವಸಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು’ ಎಂದು ವಕೀಲ ಶಂಕರಪ್ಪ ಒತ್ತಾಯಿಸಿದರು.

ಲೇಖಕ ಶಂಕರಪ್ಪ ಅವರ ‘ಶತ್ರುಪ್ರಿಯ’ ಕೃತಿಯನ್ನು ನ್ಯಾ.ಎಂ.ಎನ್‌. ವೆಂಕಟಾಚಲಯ್ಯ ಬಿಡುಗಡೆ ಮಾಡಿದರು. 66 ಪುಟಗಳ ಈ ಪುಸ್ತಕದ ಬೆಲೆ ₹ 150.

**

ಸಮಾಜದಲ್ಲಿ ನಮ್ಮ ಜವಾಬ್ದಾರಿಗಳನ್ನು ತಿಳಿದು ಬದಲಾವಣೆಗೆ ಯತ್ನಿಸಬೇಕು. ಮತದಾನದ ಹಕ್ಕು ಚಲಾಯಿಸದವರಿಗೆ ಸೌಲಭ್ಯಗಳನ್ನು ಪಡೆಯುವ ಹಕ್ಕು ಇಲ್ಲ
– ಎಂ.ಎನ್.ವೆಂಕಟಾಚಲಯ್ಯ, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.