ADVERTISEMENT

ಮತ ಬ್ಯಾಂಕ್ ರಾಜಕೀಯ ಬೇಡ- ಬಿಟ್ಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:35 IST
Last Updated 25 ಏಪ್ರಿಲ್ 2013, 19:35 IST

ಬೆಂಗಳೂರು: ರಾಜಕೀಯ ಪಕ್ಷಗಳು `ಮತ ಬ್ಯಾಂಕ್' ರಾಜಕಾರಣ ಬಿಟ್ಟು ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡಬೇಕು ಎಂದು ಅಖಿಲ ಭಾರತ ಭಯೋತ್ಪಾದಕರ ವಿರೋಧಿ ಪಡೆಯ ಅಧ್ಯಕ್ಷ ಎಂ.ಎಸ್. ಬಿಟ್ಟ ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಗರದಲ್ಲಿ ನಡೆದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಭಯೋತ್ಪಾದಕ ಪ್ರಕರಣಗಳನ್ನು ಶೀಘ್ರವಾಗಿ ವಿಚಾರಣೆ ನಡೆಸಿ, ಆರೋಪಿಗಳಿಗೆ 6 ತಿಂಗಳ ಒಳಗಾಗಿ ಶಿಕ್ಷೆ ವಿಧಿಸಬೇಕು.

ಈ ನಿಟ್ಟಿನಲ್ಲಿ  `ಭಯೋತ್ಪಾದಕ ವಿರೋಧಿ ಸೇನಾ ನ್ಯಾಯಾಲಯ'ವನ್ನು ತಕ್ಷಣವೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವವರು ಯಾವುದೇ ಧರ್ಮದವರಾಗಿದ್ದರೂ ಶಿಕ್ಷೆ ವಿಧಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು  ಆಗ್ರಹಿಸಿದರು.

`ಕೆಲ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ಭಯೋತ್ಪಾದನೆಗೆ ಉತ್ತೇಜನ ಕೊಡುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

ಚೀನಾ ಭಾರತದ ಗಡಿಯೊಳಗೆ ನುಸುಳುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಸೂಕ್ತ  ತೀರ್ಮಾನವನ್ನು ಶೀಘ್ರವಾಗಿ ತೆಗೆದುಕೊಳ್ಳಬೇಕು ಎಂದರು.

ಭಯೋತ್ಪಾದಕರಿಗೆ ನಿರ್ಭಯವಾಗಿ ಶಿಕ್ಷೆ ವಿಧಿಸುವ ನ್ಯಾಯಾಧೀಶರು ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ನೀಡುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.