ADVERTISEMENT

ಮದುವೆ ದಿನವೇ ನವಜೋಡಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST

ಬೆಂಗಳೂರು: ಪ್ರೇಮ ವಿವಾಹವಾದ ದಿನವೇ ದಂಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹದೇವಪುರ ಸಮೀಪದ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಪಾದಚಾರಿ ಮಾರ್ಗದಲ್ಲಿ ಶನಿವಾರ ನಸುಕಿನಲ್ಲಿ ಅವರ ಶವಗಳು ಪತ್ತೆಯಾಗಿವೆ.

ನಗರದ ದೊಡ್ಡಬಾಣಸವಾಡಿಯ ಶಂಕರ್ ಥೆಂಡ್ರಲ್-ಭಾಗ್ಯ ದಂಪತಿಯ ಮಗ ಪಾಂಡು (23) ಹಾಗೂ ಕಾಕ್ಸ್‌ಟೌನ್ ನಿವಾಸಿಗಳಾದ ಸಗೈನಾಥನ್-ಶಾಂತಿಮೇರಿ ದಂಪತಿಯ ಮಗಳು ಅನಿತಾ ಮೇರಿ (24) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ಹೊರಮಾವು ಸಮೀಪದ `ಈಸಿ ಡೇ ಸೇಲ್' ಎಂಬ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು.

ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಅವರು, ಶುಕ್ರವಾರ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಅದೇ ದಿನ ರಾತ್ರಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

`ಶನಿವಾರ ಬೆಳಿಗ್ಗೆ 3.30ರ ಸುಮಾರಿಗೆ ಮಹದೇವಪುರ ವರ್ತುಲ ರಸ್ತೆಯಲ್ಲಿ ಗಸ್ತು ತಿರುಗುವಾಗ, ಮಾರುತಿ ಸಾಮಿಲ್ ಮುಂದೆ ಯುವಕ-ಯುವತಿಯ ಶವಗಳು ಬಿದ್ದಿದ್ದವು. ಮೃತರ ಬಳಿ ದೊರೆತ ಮೊಬೈಲ್‌ನಿಂದ ಅವರ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು' ಎಂದು ಮಹದೇವಪುರ ಪೊಲೀಸರು ಹೇಳಿದ್ದಾರೆ.

`ಪಾಂಡು ಮತ್ತು ಅನಿತಾ ಎರಡು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರ (ಜೂ.6) ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ಪ್ರೇಮಿಗಳು, ಕೆಲಸಕ್ಕೂ ಹೋಗಿಲ್ಲ. ಮಗಳು ರಾತ್ರಿಯಾದರೂ ಮನೆಗೆ ಬಾರದ ಕಾರಣ ಅನಿತಾಳ ಪೋಷಕರು, ಬೆಳಿಗ್ಗೆ ಮಾರಾಟ ಮಳಿಗೆಗೆ ಹೋಗಿ ವಿಚಾರಿಸಿದ್ದಾರೆ. ಆಗ ಅನಿತಾ ಗುರುವಾರವೇ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋಗಿರುವುದು ಗೊತ್ತಾಗಿದೆ' ಎಂದು ಪೊಲೀಸರು ಮಾಹಿತಿ ನೀಡಿದರು.

`ಶುಕ್ರವಾರ ಮಧ್ಯಾಹ್ನ ಅನಿತಾಳ ಮೊಬೈಲ್‌ಗೆ ಕರೆ ಮಾಡಿದಾಗ `ನಾವು ತಮಿಳುನಾಡಿನ ವೇಲಂಗಣಿಯಲ್ಲಿದ್ದೇವೆ' ಎಂದು ಹೇಳಿದಳು. ಸಂಜೆ ಐದು ಗಂಟೆ ಸುಮಾರಿಗೆ ವಾಪಸ್ ಕರೆ ಮಾಡಿದ ಆಕೆ, `ನಾನು ಪಾಂಡುವನ್ನು ಮದುವೆಯಾಗಿದ್ದು, ಇಬ್ಬರೂ ಶಿವಾಜಿನಗರದಲ್ಲೇ ಇದ್ದೇವೆ' ಎಂದಳು. ಆಗ ನಾನು ಸಹ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿದ್ದೆ. ಆದರೆ, 5.30ರ ಸುಮಾರಿಗೆ ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು' ಎಂದು ಅನಿತಾಳ ಭಾವ ಜಾರ್ಜ್ `ಪ್ರಜಾವಾಣಿ'ಗೆ ತಿಳಿಸಿದರು.

ಜೀವಂತವಾಗಿ ಬರಲಿಲ್ಲ: `ಕೆಲಸಕ್ಕೆ ಹೋಗಿದ್ದ ಮಗ ರಾತ್ರಿ ಕರೆ ಮಾಡಿ, ಕೆಲಸದ ಮೇಲೆ ಬೇರೆ ಊರಿಗೆ ಹೋಗುತ್ತಿದ್ದೇನೆ. ಶುಕ್ರವಾರ ಮನೆಗೆ ಬರುತ್ತೇನೆ ಎಂದು ಹೇಳಿದ್ದ. ಆದರೆ, ಶುಕ್ರವಾರ ರಾತ್ರಿ ಕರೆ ಮಾಡಿ, ಅನಿತಾ ಎಂಬಾಕೆಯನ್ನು ಮದುವೆಯಾಗಿರುವುದಾಗಿ ಹೇಳಿದ. ಇದರಿಂದ ಆಘಾತವಾಗಿ `ಮೊದಲು ಮನೆಗೆ ಬಾ, ಮದುವೆ ವಿಷಯ ಚರ್ಚಿಸೋಣ' ಎಂದು ಹೇಳಿದ್ದೆ.

ಆದರೆ, ಆತ ಜೀವಂತವಾಗಿ ವಾಪಸ್ ಬರಲಿಲ್ಲ' ಎಂದು ಪಾಂಡು ತಂದೆ ಶಂಕರ್ ಥೆಂಡ್ರಲ್ ದುಃಖತಪ್ತರಾಗಿ ಹೇಳಿದರು.ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಧರ್ಮಸ್ಥಳದಲ್ಲಿ ಮದುವೆ
ಗುರುವಾರ ಮನೆಯಿಂದ ಹೊರಟ ಪ್ರೇಮಿಗಳು, ಹೊರಮಾವು ಸಮೀಪದ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಾಂಗಲ್ಯ ಸರ ಹಾಗೂ ಚಿನ್ನದ ಉಂಗುರುವನ್ನು ಖರೀದಿಸಿದ್ದಾರೆ. ಅನಿತಾ ಅವರ ಬ್ಯಾಗ್‌ನಲ್ಲಿ ಆಭರಣ ಖರೀದಿ ಮಾಡಿರುವ ಬಿಲ್ ಕೂಡ ಸಿಕ್ಕಿದೆ. ಅದೇ ದಿನ ರಾತ್ರಿ ಧರ್ಮಸ್ಥಳಕ್ಕೆ ತೆರಳಿರುವ ಅವರು, ಶುಕ್ರವಾರ ಧರ್ಮಸ್ಥಳದಲ್ಲಿ ಮದುವೆಯಾಗಿದ್ದಾರೆ.

ಬಳಿಕ ಕೃಷ್ಣಗಿರಿಯಲ್ಲಿರುವ ಸಂಬಂಧಿ ಚಿತ್ರ ಎಂಬುವರ ಮನೆಗೆ ಹೋಗಿದ್ದರು ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ ಎಂದು ಮಹದೇವಪುರ ಪೊಲೀಸರು ತಿಳಿಸಿದ್ದಾರೆ.

ರಾತ್ರಿ 9 ಗಂಟೆಗೆ ಕೃಷ್ಣಗಿರಿಯಿಂದ ಹೊರಟ ಪ್ರೇಮಿಗಳು, ತಡರಾತ್ರಿ ನಗರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತರ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರ ವಿಚಾರಣೆ ನಡೆಸಿ ಅವರ ಪ್ರೀತಿಗೆ ಯಾರಿಂದಲಾರದರೂ ಬೆದರಿಕೆ ಇತ್ತೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೀತಿ ವಿಷಯ ಗೊತ್ತಿಲ್ಲ
ಮಗಳ ಮೇಲೆ ಅಪಾರ ಮಮತೆ ಇಟ್ಟುಕೊಂಡಿದ್ದೆ. ಆದರೆ, ತುಂಬಾ ನೋವು ಕೊಟ್ಟು ಹೋಗಿದ್ದಾಳೆ. ಪ್ರೀತಿಯ ವಿಷಯವನ್ನು ಹೇಳಿಕೊಂಡಿದ್ದರೆ ಆಕೆಯ ಇಚ್ಛೆಯಂತೆಯೇ ಮದುವೆ ಮಾಡುತ್ತಿದ್ದೆ. ಗುರುವಾರ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಅನಿತಾ, ರಾತ್ರಿಯಾದರೂ ಮನೆಗೆ ಬರಲಿಲ್ಲ. ಮಗಳು ಕಾಣೆಯಾಗಿರುವ ಬಗ್ಗೆ ಪುಲಿಕೇಶಿನಗರ ಠಾಣೆಗೆ ಶುಕ್ರವಾರ ದೂರು ಕೊಟ್ಟಿದ್ದೆ.
- ಸಗೈನಾಥನ್, ಅನಿತಾ ತಂದೆ .

ಒಟ್ಟಿಗೆ ಹೂಳಲು ಒಪ್ಪಲಿಲ್ಲ
`ಪ್ರೀತಿ ವಿಷಯ ಹೇಳಿಕೊಂಡಿದ್ದರೆ, ಇಂತಹ ಸನ್ನಿವೇಶ ಬರುತ್ತಿರಲಿಲ್ಲ. ಅನಿತಾ, ಪಾಂಡು ಎದೆ ಮೇಲೆ ತಲೆ ಇಟ್ಟುಕೊಂಡೇ ಪ್ರಾಣ ಬಿಟ್ಟಿದ್ದಳು. ಅಲ್ಲದೇ, ತಾಳಿ ಇದ್ದುದರಿಂದ ದಂಪತಿಯನ್ನು ಒಟ್ಟಿಗೆ ಹೂಳಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಅದಕ್ಕೆ ಪಾಂಡು ಪೋಷಕರು ಒಪ್ಪಲಿಲ್ಲ'
- ಜಾರ್ಜ್, ಅನಿತಾ ಭಾವ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.