ADVERTISEMENT

ಮರ ಸಂರಕ್ಷಣಾ ತಜ್ಞರ ಸಮಿತಿ ವಿಳಂಬ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮರಗಳ ಬಲಿಯನ್ನು ತಪ್ಪಿಸುವಲ್ಲಿ ಪ್ರಗತಿ ಇಲ್ಲ; ಬೆಂಗಳೂರು ಎನ್ವಿರಾನ್ಮೆಂಟಲ್‌ ಟ್ರಸ್ಟ್‌ ಕಳವಳ

ಬಿ.ಎಸ್.ಷಣ್ಮುಖಪ್ಪ
Published 15 ಮೇ 2019, 19:03 IST
Last Updated 15 ಮೇ 2019, 19:03 IST
   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ (ಬಿಬಿಎಂಪಿ) ಅಭಿವೃದ್ಧಿ ಕಾಮಗಾರಿಗೆ ಮರಗಳು ಬಲಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಇನ್ನೂ ಯಾವುದೇ ಪ್ರಗತಿ ಕಂಡು ಬಂದಿಲ್ಲ’ ಎಂದು ‘ಬೆಂಗಳೂರು ಎನ್ವಿರಾನ್ಮೆಂಟಲ್‌ ಟ್ರಸ್ಟ್‌’ (ಬಿಇಟಿ) ಕಳವಳ ವ್ಯಕ್ತಪಡಿಸಿದೆ.

‘ಮರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪರಿಸರ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಬಂಧಿತ ಇಲಾಖೆಗಳ ತಜ್ಞರ ಸಮಿತಿಯ ಅಭಿಪ್ರಾಯ ಕ್ರೋಡೀಕರ ಣಕ್ಕೆ ಹೈಕೋರ್ಟ್‌ ಆದೇಶಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದು
ಕೊಂಡಿಲ್ಲ’ ಎಂದು ಬಿಇಟಿ ಹೇಳಿದೆ.

‘ಕೋರ್ಟ್ ನಿರ್ದೇಶನದ ಅನುಸಾರ ಮೇಯರ್ ಸಭೆಯನ್ನೇನೊ ಕರೆದಿದ್ದಾರೆ. ಆದರೆ, ದಿನಾಂಕವನ್ನು ಇನ್ನೂ ನಿಗದಿಗೊಳಿಸಿಲ್ಲ. ಇದೇ 20ರ ನಂತರ ಫೋನ್‌ ಮಾಡಲು ನನಗೆ ತಿಳಿಸಿದ್ದಾರೆ. ಅಂತೆಯೇ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಈತನಕ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಬಿಇಟಿ ಅಧ್ಯಕ್ಷರೂ ಆದ ಪರಿಸರ ತಜ್ಞ ಎ.ಎನ್‌. ಯಲ್ಲಪ್ಪ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಏತನ್ಮಧ್ಯೆ ಅರಣ್ಯ ಇಲಾಖೆಯ ಮೂಲಗಳು, ‘ಈ ದಿಸೆಯಲ್ಲಿ ಅರಣ್ಯ ಇಲಾಖೆ, ಬಿಬಿಎಂಪಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ತಜ್ಞರ ವರದಿ ಸಿದ್ಧಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ತಿಳಿಸಿವೆ.

ಪಿಐಎಲ್‌: ‘ಮೆಟ್ರೊ ರೈಲು ಮಾರ್ಗ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾಕಷ್ಟು ಮರಗಳನ್ನು ಕಡಿಯಲಾಗುತ್ತಿದೆ. ವೃಕ್ಷ ಸಂರಕ್ಷಣಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಲ್ಲಿ ಬಿಡಿಎ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿಫಲವಾಗಿವೆ’ ಎಂದು ಆಕ್ಷೇಪಿಸಿ ನಗರದ ದತ್ತಾತ್ರೇಯ ಟಿ.ದೇವಾರೆ ಮತ್ತು ಬಿಇಟಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (‍ಪಿಐಎಲ್‌) ಸಲ್ಲಿಸಿದ್ದಾರೆ.

ಕಳೆದ ತಿಂಗಳ 22ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ‘ಮರಗಳನ್ನು ಕಡಿಯಬಹುದೇ ಅಥವಾ ಸಂರಕ್ಷಿಸಬಹುದೇ ಎಂಬ ಬಗ್ಗೆ ತಜ್ಞರ ಸಮಿತಿಯು ಮೊದಲು ಕೂಲಂಕಷವಾಗಿ ಪರಿಶೀಲಿಸಬೇಕು. ಮರವನ್ನು ಉಳಿಸಲು ಸಾಧ್ಯವೇ ಇಲ್ಲ ಎಂದಾದರೆ ಮಾತ್ರ ಕಡಿಯಲು ಅವಕಾಶ ನೀಡುವಂತೆ ಸಮಿತಿ ನೋಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿತ್ತು.

ಮಧ್ಯಂತರ ಮನವಿ ಏನು?:

* ಬೆಂಗಳೂರು ನಗರ ಜಿಲ್ಲೆಯ ‘ವೃಕ್ಷ ಪ್ರಾಧಿಕಾರ’ ಮತ್ತು ‘ವೃಕ್ಷ ಸಂರಕ್ಷಣಾ ಅಧಿಕಾರಿಗಳು’ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ–1976, ಕರ್ನಾಟಕ ವೃಕ್ಷ ಸಂರಕ್ಷಣಾ ನಿಯಮಗಳು–1977, ಬಾಂಬೆ ಹೈಕೋರ್ಟ್‌ 2013 ಮತ್ತು 2019ರಲ್ಲಿ ಪಿಐಎಲ್‌ಗಳಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪುಗಳನ್ನು ಪಾಲಿಸಲು ನಿರ್ದೇಶಿಸಬೇಕು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು.

* ಬೆಂಗಳೂರು ನಗರ ಜಿಲ್ಲೆಯ ‘ವೃಕ್ಷ ಪ್ರಾಧಿಕಾರ’ ಮತ್ತು ‘ವೃಕ್ಷ ಸಂರಕ್ಷಣಾ ಅಧಿಕಾರಿಗಳು’ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ–1976ರ ಅನುಸಾರ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಕನಿಷ್ಠ ಪಕ್ಷ ಮೂರು ತಿಂಗಳಲ್ಲಿ ಒಮ್ಮೆಯಾದರೂ ಸಭೆ ನಡೆಸಬೇಕು ಮತ್ತು ಸಭೆಯ ಟಿಪ್ಪಣಿಗಳು ಸಾರ್ವಜನಿಕವಾಗಿ ಲಭ್ಯವಿರಬೇಕು.

* ಐದು ವರ್ಷಕ್ಕೊಮ್ಮೆ ವೃಕ್ಷಗಣತಿ ನಡೆಸಬೇಕು. ಈ ಕುರಿತ ಮಾಹಿತಿಗಳನ್ನು ಅರಣ್ಯ ಇಲಾಖೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು.

* ರಸ್ತೆ, ಸಾರ್ವಜನಿಕ ಉದ್ಯಾನ, ಕೆರೆ, ನದಿಗಳ ದಡಗಳಲ್ಲಿ ಮರಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಳೆಸಲಾಗಿದೆಯೇ, ಅಗತ್ಯವಿರುವೆಡೆ ಹೊಸ ಸಸಿಗಳನ್ನು ನೆಡಲಾಗಿದೆಯೇ, ಅವುಗಳ ಬೆಳವಣಿಗೆ ಹೇಗಿದೆ, ಹೇಗೆ ಎಂಬ ಬಗ್ಗೆ ಕಾಯ್ದೆ ಅನುಸಾರ ನಿರ್ವಹಿಸುವಂತೆ ನಿರ್ದೇಶಿಸಬೇಕು.

*ಸಾರ್ವಜನಿಕ ಉದ್ದೇಶಕ್ಕಾಗಿ ಮರಗಳನ್ನು ಕಡಿಯಲು ಕೋರಲಾದ ಅರ್ಜಿಗಳನ್ನು ವಿಲೇವಾರಿ ಮಾಡುವ ಮುನ್ನ ಈ ಕುರಿತ ವಿವರಗಳನ್ನು ಸಾರ್ವಜನಿಕ ನೋಟಿಸ್‌ ಮೂಲಕ ಕಡ್ಡಾಯವಾಗಿ ಪ್ರಚುರಪಡಿಸಬೇಕು. ಈ ಕುರಿತಂತೆ ಸಲ್ಲಿಕೆಯಾಗುವ ಎಲ್ಲ ಆಕ್ಷೇಪಣೆಗಳನ್ನು ವೃಕ್ಷ ಸಂರಕ್ಷಣಾ ಅಧಿಕಾರಿಯು ಪರಿಶೀಲನೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು.

*ಸಾರ್ವಜನಿಕ ಯೋಜನೆಗೆ ಮರಗಳು ಅಡ್ಡಿಯಾಗಿವೆ ಎಂದಾದರೆ, ಅಂತಹುವುಗಳನ್ನು ಕಡಿಯಲು ಆದೇಶಿಸಬೇಕು.

* ಕಡಿಯುವ ಮರಗಳ ಬಗ್ಗೆ ವೆಬ್‌ಸೈಟ್‌ನಲ್ಲಿ 15 ದಿನಗಳವರೆಗೆ ಈ ವಿಷಯವನ್ನು ಸಾರ್ವಜನಿಕ ಅವಗಾಹನೆಗೆ ತಂದಿರಬೇಕು. ಅಲ್ಲಿಯವರೆವಿಗೂ ಮರಗಳನ್ನು ಕಡಿಯಬಾರದು.

*ಮರವನ್ನು ಸ್ಥಳಾಂತರಿಸುವ ಬಗ್ಗೆ ಮೊದಲು ಪರಿಶೀಲಿಸಬೇಕು. ಸಾಧ್ಯವಿಲ್ಲ ಎಂದಾದರೆ, ಕಾಯ್ದೆ ಅನುಸಾರ ಎಲ್ಲಿ ಮರಗಳನ್ನು ಕಡಿಯಲಾಗುತ್ತದೆಯೋ ಅಂತಹ ಸ್ಥಳದಲ್ಲಿ ಹೊಸ ಸಸಿ ನೆಡುವ ಷರತ್ತಿಗೆ ಒಳಪಟ್ಟರೆ ಅನುಮತಿ ನೀಡಬೇಕು.

*ವೃಕ್ಷ ಸಂರಕ್ಷಣಾ ಅಧಿಕಾರಿಗಳು ಸ್ವತಂತ್ರರಾಗಿ ಮತ್ತು ನಿಷ್ಪಕ್ಷಪಾತಿಗಳಾಗಿ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು.

*ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮರಗಳು ಯಾವ ಜಾತಿಯವು ಎಂಬುದನ್ನು ಕಾಯ್ದೆಯ ನಿರ್ದಿಷ್ಟವಾಗಿ ವರ್ಗೀಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.