ADVERTISEMENT

ಮಲಿನಗೊಳ್ಳುತ್ತಿದೆ ಕಗ್ಗದಾಸಪುರ ಕೆರೆ

ಪೀರ್‌ ಪಾಶ, ಬೆಂಗಳೂರು
Published 14 ಜುಲೈ 2017, 20:02 IST
Last Updated 14 ಜುಲೈ 2017, 20:02 IST
ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಕಗ್ಗದಾಸಪುರ ಕೆರೆಯಲ್ಲಿ ಜೊಂಡು ಹುಲ್ಲು ಬೆಳೆದಿರುವುದರಿಂದ ಹಸಿರಿನ ಮೈದಾನದಂತೆ ಕಾಣುತ್ತಿದೆ.          -ಪ್ರಜಾವಾಣಿ ಚಿತ್ರಗಳು
ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಕಗ್ಗದಾಸಪುರ ಕೆರೆಯಲ್ಲಿ ಜೊಂಡು ಹುಲ್ಲು ಬೆಳೆದಿರುವುದರಿಂದ ಹಸಿರಿನ ಮೈದಾನದಂತೆ ಕಾಣುತ್ತಿದೆ. -ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಈ ಕೆರೆಯಂಗಳದಲ್ಲಿ ಬೆಳೆದ ಜೊಂಡು ಹುಲ್ಲಿನ ಹಸಿರು ಕಣ್ಣಿಗೆ ರಾಚುತ್ತದೆ. ಅದರ ಮೇಲಿನ ನೀಲಾಕಾಶ ನೋಡಲು ಕಣ್ಮನ ಸೆಳೆಯುತ್ತದೆ. ಆದರೆ, ಆ ಹುಲ್ಲಿನಡಿಯ ತ್ಯಾಜ್ಯನೀರಿನ ದುರ್ವಾಸನೆ ಮೂಗಿಗೆ ತಾಗಿದಾಗಲೇ  ಕೆರೆಯ ದುಸ್ಥಿತಿ ಅರಿವಾಗುತ್ತದೆ.

ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದ ಕಗ್ಗದಾಸಪುರ ಕೆರೆಗೆ ತ್ಯಾಜ್ಯನೀರು ಸೇರುತ್ತಿದೆ. ಸುತ್ತಲಿನ ನಾಗವಾರಪಾಳ್ಯ, ಭುವನೇಶ್ವರಿ ನಗರ, ಬೆನ್ನಿಗಾನಹಳ್ಳಿ, ಬೈರಸಂದ್ರ, ಮಲ್ಲೇಶಪಾಳ್ಯ, ಜಿ.ಎಂ.ಪಾಳ್ಯ, ಕಗ್ಗದಾಸಪುರ, ವಾರ್ಸೊವಾ ಬಡಾವಣೆಯ ವಸತಿ ಸಮುಚ್ಚಯಗಳ ಹಾಗೂ ಕಂಪೆನಿಗಳ ತ್ಯಾಜ್ಯನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾರ್ವಜನಿಕರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಕೆರೆಯ ಸುತ್ತಲೂ ಹಾಕಿರುವ ತಂತಿಬೇಲಿ ಅಲ್ಲಲ್ಲಿ ತುಂಡಾಗಿದೆ. ಇದರಿಂದ ಕಟ್ಟಡ ನಿರ್ಮಾಣ ತ್ಯಾಜ್ಯ ತಂದು ಸುರಿಯುವವರಿಗೆ ರಹದಾರಿ ತೆರೆದಂತಾಗಿದೆ.

ADVERTISEMENT

36 ಎಕರೆ ವಿಸ್ತೀರ್ಣದ ಕೆರೆಯ ಸುತ್ತಲೂ ವಾಯುವಿಹಾರ ಪಥವನ್ನು ನಿರ್ಮಿಸಲು ₹ 1.25 ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲಲ್ಲಿ 50 ಕ್ಕೂ ಹೆಚ್ಚು ಕಲ್ಲುಬೆಂಚುಗಳನ್ನು ಅಳವಡಿಸಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದೇ ಕೆರೆಯ ಪಶ್ಚಿಮ ಭಾಗದಲ್ಲಿನ ವಿಹಾರಪಥದಲ್ಲಿ ಮತ್ತು ಬೆಂಚುಗಳ ಸುತ್ತ ಗಿಡಗಂಟಿಗಳು ಬೆಳೆದಿವೆ. ಇಲ್ಲಿ ಜನರ ಓಡಾಡಲು ಭಯಪಡುತ್ತಿದ್ದಾರೆ.

(ಕೆರೆಯಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯದ ರಾಶಿ)

ಕೆರೆಯ ಕಲುಷಿತ ನೀರಿನ ದುರ್ವಾಸನೆಯಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ‘ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ. ಮನೆಯಂಗಳದಲ್ಲಿ ಕುಳಿತ ನೆರೆಹೊರೆಯವರೊಂದಿಗೆ ನಾಲ್ಕು ಮಾತನಾಡಲು ಆಗುವುದಿಲ್ಲ’ ಎಂಬುದು ಬೈರಸಂದ್ರದ ನಿವಾಸಿ ಲಕ್ಷ್ಮಿ ಅವರ ಅಳಲು.

‘ಬಾಲ್ಯದಲ್ಲಿ ಈ ಕೆರೆಯಲ್ಲಿ ಸ್ನೇಹಿತರೆಲ್ಲ ಸೇರಿ ಈಜುತ್ತಿದ್ದೆವು. ಸುತ್ತ ಭತ್ತದ ಗದ್ದೆ, ತೆಂಗಿನ ತೋಟ, ರಾಗಿ ಹೊಲಗಳು ಇದ್ದವು. ಕೆರೆಯಲ್ಲಿ ಮೀನುಗಳು ಯಥೇಚ್ಚವಾಗಿದ್ದವು. ಆದರೆ, ಇಂದಿನ ಕೆರೆಯ ಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ’ ಎಂದು ಕಗ್ಗದಾಸಪುರದ ಹಿರಿಯ ನಾಗರಿಕ ರಾಮಸ್ವಾಮಿ ಹಳೆಯ ನೆನಪನ್ನು ಹಂಚಿಕೊಂಡರು.

‘ಕೆರೆಯ ಸುತ್ತಲು ಆಕರ್ಷಕವಾದ 40 ಅಡಿ ಅಗಲದ ವಿಹಾರ ಪಥ ನಿರ್ಮಿಸುವ ಮೊದಲು, ಕೆರೆಗೆ ತ್ಯಾಜ್ಯನೀರು ಸೇರುವುದನ್ನು ತಡೆಯಬೇಕು’ ಎಂಬುದು ಅವರ ಒತ್ತಾಯ.

‘ಕೆರೆ ಅಭಿವೃದ್ಧಿ ಕೆಲಸವನ್ನು ಕಳೆದ ಐದಾರು ವರ್ಷದಿಂದ ಮಾಡುತ್ತಲೇ ಇದ್ದಾರೆ. ತಂತಿ ಬೇಲಿ ಮುರಿದಿರುವುದರಿಂದ ಕೆರೆಯಂಚಿನಲ್ಲಿ  ಮಾದಕ ವಸ್ತುಗಳ ಬಳಕೆ, ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ’ ಎಂದು ಬೈರಸಂದ್ರದ  ನಿವಾಸಿ ಮುನಿಸ್ವಾಮಿ ಆತಂಕ ವ್ಯಕ್ತಪಡಿಸಿದರು.

‘ಕೆರೆಯಲ್ಲಿ ಕಳೆಸಸಿಗಳು ಹೆಚ್ಚಿವೆ. ಇದರಿಂದ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಪಾರ್ಥೇನಿಯಂ ಕಳೆಯ ಹೆಚ್ಚಳದಿಂದ ಉಸಿರಾಟದ ತೊಂದರೆಯೂ ಉಂಟಾಗುತ್ತಿದೆ. ಕೆರೆಯನ್ನು ಅಭಿವೃದ್ಧಿಪಡಿಸಿ ಮತ್ಸ್ಯೋದ್ಯಮ ಮತ್ತು ಬೋಟಿಂಗ್‌ಗೆ ಅವಕಾಶ ಮಾಡಿಕೊಡಬೇಕು’ ಎಂಬುದು ಸ್ಥಳೀಯ ನಿವಾಸಿ ಚಮನ್‌ಲಾಲ್‌ ಅವರು ಆಶಯ.

(ಕೆರೆಯ ಅಂಚಿನಲ್ಲಿ ಬಿಸಾಡಿರುವ ಸುಖಾಸನಗಳು ಮತ್ತು ತ್ಯಾಜ್ಯ)

‘ಮಾಲಿನ್ಯದಿಂದ ಕೆರೆಯಂಗಳವನ್ನು ಆವಾಸ ಸ್ಥಾನ ಮಾಡಿಕೊಂಡಿರುವ ಅಪರೂಪದ ಪಕ್ಷಿಸಂಕುಲಕ್ಕೂ ಕುತ್ತು ಒದಗಿದೆ. ಕೆರೆಯಂಚಿನಲ್ಲಿ ಮುನಿಸ್ವಾಮಿ, ತಾಯಮ್ಮದೇವಿ ದೇವಸ್ಥಾನಗಳನ್ನು ಅನಧಿಕೃತವಾಗಿ ನಿರ್ಮಿಸಿದ್ದಾರೆ’ ಎಂದು ಸ್ಥಳೀಯ ನಿವಾಸಿ ರಾಘವೇಂದ್ರ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.