ADVERTISEMENT

ಮಳೆ: ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಮಳೆ ಬಂದಾಗ ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸೋಮವಾರ ಕಂಡ ದೃಶ್ಯ –ಪ್ರಜಾವಾಣಿ ಚಿತ್ರ
ಮಳೆ ಬಂದಾಗ ನಗರದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸೋಮವಾರ ಕಂಡ ದೃಶ್ಯ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ನೀರು ರಸ್ತೆಯಲ್ಲೇ ನಿಂತಿದ್ದರಿಂದ ಸಿಲ್ಕ್‌ಬೋರ್ಡ್‌, ಬನ್ನೇರುಘಟ್ಟ ರಸ್ತೆ, ಇಬ್ಬಲೂರು ಇಕೋಸ್ಪೇಸ್‌ ಮತ್ತು ಕೆ.ಆರ್‌.ಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿತು.

ಕಚೇರಿ ಬಿಡುವ ವೇಳೆಯಲ್ಲೇ ಮಳೆ ಆರಂಭವಾಗಿದ್ದರಿಂದ ಮನೆಗೆ ಹೋಗುವ ಧಾವಂತದಲ್ಲಿದ್ದ ಉದ್ಯೋಗಿಗಳು ತೊಂದರೆ ಅನುಭವಿಸಿದರು. ನಿತ್ಯವೂ ಇರುವ ಸಂಚಾರ ದಟ್ಟಣೆಯೊಂದಿಗೆ ರಸ್ತೆಯಲ್ಲಿ ಮಳೆ ನೀರೂ ನಿಂತಿದ್ದರಿಂದ ಸಮಸ್ಯೆ ದುಪ್ಪಟ್ಟಾಗಿತ್ತು.

ಕೋರಮಂಗಲ 3ನೇ ಬ್ಲಾಕ್‌, ಲಾಲ್‌ಬಾಗ್‌, ಬೊಮ್ಮನಹಳ್ಳಿ, ಮಡಿವಾಳ ಜಂಕ್ಷನ್‌ನಲ್ಲಿ ಕಿಲೋಮೀಟರ್‌ ಗಟ್ಟಲೆ ದೂರದವರೆಗೂ ವಾಹನಗಳು ನಿಂತಿದ್ದವು. ಸವಾರರು ಗಂಟೆಗಟ್ಟಲೆ ವಾಹನಗಳಲ್ಲಿ ಕುಳಿತು ಕಿರಿಕಿರಿ ಅನುಭವಿಸಿದರು.

ADVERTISEMENT

ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಚಾರ ವಿಭಾಗದ ಪೊಲೀಸರು ಹರಸಾಹಸಪಟ್ಟರು. ಬನಶಂಕರಿ, ಸಾರಕ್ಕಿಯಲ್ಲಿ ಮಳೆಯಲ್ಲೇ ಕರ್ತವ್ಯ ನಿರ್ವಹಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಂಚಾರ ಪೊಲೀಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಡಬಲ್‌ ರೋಡ್‌, ಜೆ.ಪಿ. ನಗರ ನಾಲ್ಕನೇ ಹಂತ, ಯಲಹಂಕದ ಆಮ್ಕೊ ಬಡಾವಣೆ, ಭೂಪಸಂದ್ರ, ವೈಟ್‌ಫೀಲ್ಡ್‌ನಲ್ಲಿ ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.