ADVERTISEMENT

ಮಹಿಳಾ ಕಾರ್ಮಿಕರಿಗೆ ಗುರುತಿನ ಚೀಟಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಬೆಂಗಳೂರು: ಅಸಂಘಟಿತ ಮಹಿಳಾ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಜಾಗೃತಿ ಸಮಿತಿಯ ಸದಸ್ಯರು ಗುರುವಾರ ನಗರದ ಕಾರ್ಮಿಕರ ಭವನದ ಬಳಿ ಧರಣಿ ನಡೆಸಿದರು.

ಸಮಿತಿಯ ಕಾರ್ಯದರ್ಶಿ ಗೀತಾ ಮೆನನ್ ಮಾತನಾಡಿ, `ಅಂತರರಾಷ್ಟ್ರೀಯ ದುಡಿವ ಮಹಿಳಾ ದಿನಾಚರಣೆ ಶತಮಾನ ಪೂರೈಸಿದೆ. ಆದರೆ ಮಹಿಳಾ ಕಾರ್ಮಿಕರಿಗೆ ಇದುವರೆಗೂ ಮೂಲಭೂತ ಹಕ್ಕುಗಳು ಸಿಕ್ಕಿಲ್ಲ.

ಚಿಂದಿ ಆಯುವ ಮತ್ತು ಮನೆಕೆಲಸ ಮಾಡುವ ಮಹಿಳೆಯರನ್ನು ಜನ ಕಳ್ಳರಂತೆ ನೋಡುತ್ತಾರೆ. ಆದ್ದರಿಂದ ಎಲ್ಲಾ ಮಹಿಳಾ ಕಾರ್ಮಿಕರಿಗೂ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು~ ಎಂದು ಒತ್ತಾಯಿಸಿದರು.

ಮಹಿಳಾ ಕಾರ್ಮಿಕರಿಗೆ ನಿವೃತ್ತಿ ವೇತನ ನೀಡಬೇಕು ಹಾಗೂ ಕೊಳೆಗೇರಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಮಹಿಳೆಯರು ಕಾಯಿಲೆಗಳಿಂದ ನರಳುವಂತಾಗಿದೆ. ಅವರಿಗೆ ಸೂಕ್ತ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಶೀಘ್ರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಧರಣಿ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.