ADVERTISEMENT

ಮಹಿಳೆಯರಿಗೆ ಇನ್ನೂ ದೊರಕದ ಸ್ವಾತಂತ್ರ್ಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 19:30 IST
Last Updated 27 ಮಾರ್ಚ್ 2011, 19:30 IST
ಮಹಿಳೆಯರಿಗೆ ಇನ್ನೂ ದೊರಕದ ಸ್ವಾತಂತ್ರ್ಯ
ಮಹಿಳೆಯರಿಗೆ ಇನ್ನೂ ದೊರಕದ ಸ್ವಾತಂತ್ರ್ಯ   

ಬೆಂಗಳೂರು: ‘ಸೂಕ್ಷ್ಮ ಸಂವೇದನೆಯ ಪುರುಷರು, ನೀತಿಗಳನ್ನು ರೂಪಿಸುವವರು ಮತ್ತು ನ್ಯಾಯಾಂಗ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿ ಅವರ ರಕ್ಷಣೆಗೆ ಮುಂದಾಗಬೇಕು’ ಎಂದು ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ನಿವೃತ್ತ ನಿರ್ದೇಶಕಿ ಪ್ರೊ. ಮೈತ್ರೇಯಿ ಕೃಷ್ಣರಾಜ್ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು ಜ್ಞಾನಭಾರತಿಯ ಸೆನೆಟ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮಹಿಳೆ: ಬಳಕೆ, ನಿಂದನೆ ಮತ್ತು ದುರ್ಬಳಕೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗೃಹ ಸಂಬಂಧಿ ವಿಷಯಗಳಿಂದಾಗಿಯೇ ಮಹಿಳೆ ಹೆಚ್ಚು ಹಿಂಸೆಗೆ ಒಳಗಾಗುತ್ತಿದ್ದಾಳೆ. ಅಲ್ಲದೇ ಪುರುಷನ ದುರಾಕ್ರಮಣದ ಗುಣಗಳಿಂದಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಮಹಿಳೆಯರಿಗೆ ವೈಯಕ್ತಿಕ ತೀರ್ಮಾನಗಳನ್ನು ಕೈಗೊಳ್ಳುವ ಸ್ವಾತಂತ್ರ್ಯ ಈವರೆಗೂ ಸಿಕ್ಕಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ದೇಶದೆಲ್ಲೆಡೆ ಬಾಲ್ಯ ವಿವಾಹ ಪದ್ಧತಿ ಇನ್ನೂ ರೂಢಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಹೆಣ್ಣು ಮಕ್ಕಳಿಗೆ ಕೇವಲ 15 ವರ್ಷಕ್ಕೆ ಮದುವೆ ಮಾಡಲಾಗುತ್ತಿದೆ. ಇಂತಹ ಪದ್ಧತಿಗಳಿಗೆ ಕಡಿವಾಣ ಹಾಕಬೇಕು. ಮಹಿಳೆಯರಿಗೆ ಅಗತ್ಯ ಶಿಕ್ಷಣ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದರು.ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅವರು ಮಾತನಾಡಿ, ‘ಕಾಲೇಜು ವಿದ್ಯಾರ್ಥಿನಿಯರು ಮತ್ತು ಶಾಲಾ ಬಾಲಕಿಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿತ್ಯ ಐದು ನಾಪತ್ತೆ ಪ್ರಕರಣಗಳು ದಾಖಲಾಗುತ್ತಿವೆ. ಕಾಣೆಯಾದವರು ಎಲ್ಲಿ ಹೋದರು ಎಂಬುದೇ ಗೊತ್ತಾಗುತ್ತಿಲ್ಲ. ಇಂಥ ಹಲವು ಪ್ರಕರಣಗಳು ಆಯೋಗದ ಮುಂದಿವೆ’ ಎಂದು ತಿಳಿಸಿದರು.

‘ವರದಕ್ಷಿಣೆ ಕಿರುಕುಳದಿಂದ ಮಹಿಳೆಯರು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ. ಗೋಕಾಕ್, ಸವದತ್ತಿಯಿಂದ ಹೆಚ್ಚಿನ ವರದಕ್ಷಿಣೆ ಕಿರುಕುಳದ ದೂರುಗಳು ಕೇಳಿ ಬರುತ್ತಿವೆ. ಹಿಂಸೆ ಅನುಭವಿಸಿದ ಮಹಿಳೆಯರು ಧೈರ್ಯವಾಗಿ ಪೊಲೀಸರಿಗೆ ದೂರು ನೀಡುವಂತಹ ವಾತಾವರಣ ನಿರ್ಮಾಣವಾಗಬೇಕು. ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ’ ಎಂದರು.

ಬೆಂಗಳೂರು ಕೃಷಿ ವಿ.ವಿ ಯ ವಿಶ್ರಾಂತ ಕುಲಪತಿ ಪ್ರೊ.ಬಿಸಲಯ್ಯ, ಮಹಿಳೆಯರ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆಗಳಾಗಬೇಕಿದೆ. ಇದು ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ನೆರವಾಗುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸಂಶೋಧನೆ ನಡೆಸಬೇಕು’ ಎಂದು ಹೇಳಿದರು.ಬೆಂ.ವಿ.ವಿ ಕುಲಪತಿ ಡಾ. ಎನ್.ಪ್ರಭುದೇವ್, ವಿ.ವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಇಸ್ಮಾತ್ ಅಫ್ಸಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.