ADVERTISEMENT

`ಮಹಿಳೆಯರು ವಿಚಾರ ಮನೋಭಾವ ಬೆಳೆಸಿಕೊಳ್ಳಿ'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಬೆಂಗಳೂರು: `ಪ್ರಸ್ತುತ ಸಮಾಜದಲ್ಲಿರುವ ನಂಬಿಕೆ ಮತ್ತು ಆಚರಣೆಗಳ ಬಗ್ಗೆ ಮಹಿಳೆಯರು ವಿಚಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಆತ್ಮವಿಶ್ವಾಸವನ್ನು ಪಡೆಯಬೇಕು' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ  `ನಂಬಿಕೆ ಮತ್ತು ಮಹಿಳೆ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಹೊಸ ಬಗೆಯ ಆಲೋಚನೆಗಳಿಗೆ ತೆರೆದುಕೊಳ್ಳುವುದರಿಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬಹುದು. ನಂಬಿಕೆ ಮತ್ತು ಆಚರಣೆಗಳಲ್ಲಿರುವ ಶೋಷಣೆಯ ಮನೋಭಾವವನ್ನು ಪ್ರತಿಭಟಿಸಿ' ಎಂದು ಕರೆ ನೀಡಿದರು.

`ಎಲ್ಲ ಧರ್ಮಗಳಲ್ಲಿಯೂ ಹೆಣ್ಣುಮಕ್ಕಳನ್ನು ನಿರ್ಬಂಧಿಸುವುದಕ್ಕಾಗಿಯೇ ಹಲವು ಆಚರಣೆಗಳು ಚಾಲ್ತಿಯಲ್ಲಿವೆ. ಆದರೆ, ಪ್ರಗತಿಪರ ಹಾಗೂ ವೈಚಾರಿಕ ಮನೋಧರ್ಮದ ಸ್ತ್ರೀಯರು ಇಂತಹ ಹಲವು ನಿರ್ಬಂಧಗಳಿಂದ ಹೊರಬರಲು ಹೋರಾಟ ನಡೆಸಿದ್ದಾರೆ. ಈ ನೆಲದ ಸಂಸ್ಕೃತಿಯೊಂದಿಗೆ ಸ್ವಾಭಿಮಾನವನ್ನು ಹೊಂದುವ ಬಗ್ಗೆ ಚಿಂತನೆ ನಡೆಸಬೇಕು' ಎಂದು ಹೇಳಿದರು.

ಕನ್ನಡ ಅಧ್ಯಯನ ಕೇಂದ್ರದ ಡಾ.ಎಂ.ಸುಮಿತ್ರಾ, `ಹಲವು ವೈರುಧ್ಯಗಳ ನಡುವೆಯೂ ಮಹಿಳೆಯರ ಸವಾಲುಗಳು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಶಿಕ್ಷಣ ಹಾಗೂ ವೈಚಾರಿಕ ಮನೋಧರ್ಮದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು' ಎಂದರು.
ಪ್ರಾಧ್ಯಾಪಕ ಡಾ.ಸಿ.ಡಿ.ವೆಂಕಟೇಶ್, ಕೊಳ್ಳೆಗಾಲ ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯೆ ಭಾಗ್ಯಮ್ಮ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.