ADVERTISEMENT

ಮಹಿಳೆಯ ದೇಹವಲ್ಲ, ಅಸ್ಮಿತೆಯ ಚಿತ್ರಣ ಆಗಬೇಕು: ಮಂಜಿತ್‌ ರತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:30 IST
Last Updated 2 ಜುಲೈ 2017, 19:30 IST
ಮಾಲಿನಿ ಭಟ್ಟಾಚಾರ್ಯ, ಮಂಜಿತ್‌ ರತಿ ಮತ್ತು ಕೆ.ಎಸ್‌. ವಿಮಲಾ ಅವರು ಭಿತ್ತಿಪತ್ರಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಮಾಲಿನಿ ಭಟ್ಟಾಚಾರ್ಯ, ಮಂಜಿತ್‌ ರತಿ ಮತ್ತು ಕೆ.ಎಸ್‌. ವಿಮಲಾ ಅವರು ಭಿತ್ತಿಪತ್ರಗಳನ್ನು ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾಧ್ಯಮ, ಜಾಹೀರಾತುಗಳಲ್ಲಿ ಮಹಿಳೆಯ ದೇಹವನ್ನು ಕೇಂದ್ರೀಕರಿಸದೆ, ಆಕೆಯ ಸಾಮರ್ಥ್ಯ ಹಾಗೂ ಅಸ್ಮಿತೆಯನ್ನು ಚಿತ್ರಿಸಬೇಕು’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಂಚಾಲಕಿ ಮಂಜಿತ್‌ ರತಿ ಪ್ರತಿಪಾದಿಸಿದರು.

ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ ಟೀಚರ್ಸ್‌ ಅಸೋಸಿಯೇಷನ್‌ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಂಟಿಯಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾಧ್ಯಮಗಳಲ್ಲಿ ಮಹಿಳೆಯರ ಚಿತ್ರಣ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾಹೀರಾತುಗಳಲ್ಲಿ ಇನ್ನೂ ಸಹ ಮಹಿಳೆಯನ್ನು ಕಾಮದ ವಸ್ತುವನ್ನಾಗಿಯೇ ಬಳಸುತ್ತಿದ್ದಾರೆ. ಮಹಿಳೆ ಎಂದರೆ ಹೀಗೆಯೇ ಇರಬೇಕು ಎನ್ನುವ ಮನೋಭಾವ ಇನ್ನೂ ಜೀವಂತವಾಗಿದೆ. ಆ ಸಿದ್ಧ ಮಾದರಿಗಳನ್ನು ಒಡೆಯಬೇಕು. ಮಾಧ್ಯಮಗಳಿಂದ ಆ ರೀತಿ ಕೆಲಸ ಆಗಬೇಕು’ ಎಂದು ಹೇಳಿದರು.

ADVERTISEMENT

‘ಮಾಧ್ಯಮಗಳು ಮಹಿಳೆಯನ್ನು ಹೇಗೆ ಕಟ್ಟಿಕೊಡುತ್ತವೆಯೊ ಹಾಗೆಯೇ ಮಕ್ಕಳು ಅಭಿಪ್ರಾಯ ರೂಪಿಸಿಕೊಳ್ಳುತ್ತವೆ.   ಬಡ, ಮಧ್ಯಮ ಮಹಿಳೆಯ ಸಂಕಷ್ಟ, ಹೋರಾಟಗಳನ್ನು ಬಿಂಬಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ಮಾಲಿನಿ ಭಟ್ಟಾಚಾರ್ಯ, ‘ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಪ್ರಮಾಣ ಹೆಚ್ಚುತ್ತಲ್ಲೇ ಇದೆ. ದೌರ್ಜನ್ಯಕ್ಕೆ ತುತ್ತಾಗುವ ಮಹಿಳೆ ವಯಸ್ಸಿಗೂ, ದೌರ್ಜನ್ಯ ಎಸಗುವ ಪುರುಷನ ವಯಸ್ಸಿಗೂ ಇರುವ ಅಂತರವನ್ನು ನೋಡಿದರೆ ಗಾಬರಿ ಹುಟ್ಟಿಸುತ್ತದೆ.

17 ವರ್ಷದ ಬಾಲಕ ಅಜ್ಜಿಯ ಮೇಲೆ ಅತ್ಯಾಚಾರ ಎಸಗುತ್ತಾನೆ. ಹಾಗೆಯೇ 60–70 ವರ್ಷದ ಮುದುಕ, ಐದಾರು  ವರ್ಷದ ಮಗುವಿನ ಮೇಲೆ ಅತ್ಯಾಚಾರ  ಎಸಗಿದ ಉದಾಹರಣೆಗಳು ನಮ್ಮ ಸುತ್ತಲೂ ಇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.