ADVERTISEMENT

`ಮಾಗಡಿ ಹಗರಣ: ಅಧಿಕಾರಿಗಳೇ ಕಾರಣ'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:40 IST
Last Updated 9 ಏಪ್ರಿಲ್ 2013, 19:40 IST

ಬೆಂಗಳೂರು: `ಮಾಗಡಿ ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ರುಜುವಾತು ಆಗಿದ್ದು, ಮುಖ್ಯ ಎಂಜಿನಿಯರ್‌ರಿಂದ ಸಹಾಯಕ ಎಂಜನಿಯರ್‌ಗಳವರೆಗೆ ಎಲ್ಲ ಹಂತದ ಅಧಿಕಾರಿಗಳೂ ಅದರಲ್ಲಿ ಭಾಗಿಯಾಗಿದ್ದಾರೆ' ಎಂದು ಹಗರಣದ ತನಿಖೆಗೆ ವಿಧಾನಸಭೆಯ ಸದನ ಸಮಿತಿ ಅಭಿಪ್ರಾಯಪಟ್ಟಿದೆ.

ಹಗರಣದ ತನಿಖೆಗೆ ಸಂಬಂಧಿಸಿದಂತೆ ಮಂಗಳವಾರ ಕೊನೆಯ ಸಭೆ ನಡೆಸಿದ ಶಾಸಕ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ನೇತೃತ್ವದ ಸದನ ಸಮಿತಿ, ಪ್ರಾಥಮಿಕ ವರದಿಯನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದೆ. `ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿದೆ ಎನ್ನುವ ದೂರುಗಳು ಸತ್ಯದಿಂದ ಕೂಡಿವೆ. ಅಧಿಕಾರಿಗಳೇ ಅದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ' ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

`ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದ್ದು, 12ರಂದು ಅಂತಿಮ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ' ಎಂದು ಪಟ್ಟಣಶೆಟ್ಟಿ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು. `ಅಧಿಕಾರಿಗಳಿಂದ ಕೆಲವು ಕಡತಗಳು ಸಿಗುವುದು ತಡವಾಯಿತು. ನಮ್ಮ ಸದಸ್ಯರು ವ್ಯಕ್ತಪಡಿಸಿದ ಸಂಶಯಗಳಿಗೂ ಉತ್ತರಿಸಲು ಅವರು ಕಾಲಾವಕಾಶ ತೆಗೆದುಕೊಂಡರು. ಹೀಗಾಗಿ ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಲು ಆಗಲಿಲ್ಲ' ಎಂದು ಹೇಳಿದರು.

`ಮಾಗಡಿ ತಾಲ್ಲೂಕಿನಲ್ಲಿ ಪಿಡಬ್ಲ್ಯುಡಿ ವತಿಯಿಂದ ಕೈಗೊಳ್ಳಲಾದರೂ. 341 ಕೋಟಿ ಮೊತ್ತದ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ದೊಡ್ಡ ನಷ್ಟ ಉಂಟಾಗಿದೆ' ಎಂದು ಪಿಡಬ್ಲ್ಯುಡಿಯ ಕಾಮಗಾರಿ ಉಸ್ತುವಾರಿ ಕೋಶ ಅಭಿಪ್ರಾಯಪಟ್ಟಿತ್ತು.

`ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ಅಧಿನಿಯಮ ಉಲ್ಲಂಘಿಸಿ ಅವ್ಯವಹಾರ ನಡೆಸಲಾಗಿದೆ. ಇ-ಪ್ರೊಕ್ಯೂರ್‌ಮೆಂಟ್ ವ್ಯಾಪ್ತಿಯಲ್ಲಿ ಬರದಂತೆ ನೋಡಿಕೊಳ್ಳಲು ಮೂರು ಕಾಮಗಾರಿಗಳನ್ನು 49, 55 ಮತ್ತು 49 ಭಾಗಗಳಾಗಿ ಪ್ರತ್ಯೇಕಗೊಳಿಸಿ, ತಲಾರೂ. 19.90 ಲಕ್ಷದ ಆಸುಪಾಸಿನಲ್ಲಿ ತುಂಡು ಗುತ್ತಿಗೆ ನೀಡಲಾಗಿದೆ' ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಹಗರಣದ ತನಿಖೆಗೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಈ ಸದನ ಸಮಿತಿಯನ್ನು ರಚಿಸಿದ್ದರು.

ಹಣ ವಸೂಲಿಗೆ ತಂಡ: ಮಾಗಡಿ ಭಾಗದಲ್ಲಿ ನಡೆದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದನ್ನು ಗುಣ ನಿಯಂತ್ರಣ ಪಡೆ ಪತ್ತೆ ಮಾಡಿದ್ದರಿಂದ ಪಾವತಿಯಾದ ಹೆಚ್ಚುವರಿ ಮೊತ್ತ ವಾಪಸು ಪಡೆಯಲು ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. `ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸದೆರೂ. 25.52 ಕೋಟಿ ಮತ್ತು ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ಕೈಗೊಳ್ಳದೆರೂ. 1.19 ಕೋಟಿ ಹಣ ಪಾವತಿ ಮಾಡಲಾಗಿದೆ' ಎಂದು ಗುಣ ನಿಯಂತ್ರಣ ಪಡೆ ತನ್ನ ವರದಿಯಲ್ಲಿ ತಿಳಿಸಿತ್ತು.

`ಹೆಚ್ಚಿನ ಮೊತ್ತ ಪಾವತಿಸಲಾದ ಪ್ರಕರಣಗಳಲ್ಲಿ ಗುತ್ತಿಗೆದಾರರಿಂದ ಈ ವಿಶೇಷ ತಂಡ ಹಣ ವಸೂಲಿ ಮಾಡಬೇಕು' ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸೂಪರಿಡೆಂಟಿಂಗ್ ಎಂಜಿನಿಯರ್ ತಂಡದ ಮುಖ್ಯಸ್ಥರಾಗಿದ್ದು, ರಾಮನಗರ ಮತ್ತು ಬೆಂಗಳೂರು ಕಟ್ಟಡ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಗುಣ ನಿಯಂತ್ರಣ ಪಡೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಾಂತ್ರಿಕ ಸಹಾಯಕ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಈ ತಂಡದ ಸದಸ್ಯರಾಗಿದ್ದಾರೆ.

ಯಾವ ಗುತ್ತಿಗೆದಾರರಿಗೆ ಹೆಚ್ಚಿಗೆ ಮೊತ್ತ ಪಾವತಿಯಾಗಿದೆ ಎನ್ನುವುದನ್ನು ಗುರುತಿಸಬೇಕು. ಅವರಿಂದ ಯಾವುದೇ ಬಾಬಿನಿಂದ ಹಣ ವಸೂಲಿ ಮಾಡಬೇಕು. ಸಂದೇಹಾಸ್ಪದ ಗುತ್ತಿಗೆದಾರರಾದ ಕೆಂಪರಾಜು, ಶಂಕರ್ ಮತ್ತು ನಂಜಯ್ಯ ಅವರಿಗೆ ಯಾವುದೇ ಹಣ ಪಾವತಿ ಮಾಡಬಾರದು. ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಎಂಜಿನಿಯರ್ ಪ್ರತಿ ವಾರವೂ ತಪ್ಪದೇ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.