ADVERTISEMENT

ಮಾನ್ಯತೆ ನವೀಕರಣ: ಶುಕ್ರವಾರ ವರದಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: ರಾಜ್ಯದ ಐದು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮಾನ್ಯತೆ ನವೀಕರಣ ಮತ್ತು ಕೆಲ ಕಾಲೇಜುಗಳಲ್ಲಿನ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ಅಂತಿಮ ನಿರ್ಧಾರ ಶುಕ್ರವಾರ ಪ್ರಕಟವಾಗಲಿದೆ.

ಗುರುವಾರ ನಡೆದ ಮಂಡಳಿಯ ಸಭೆಯಲ್ಲಿ ಕಾಲೇಜುಗಳ ಮಾನ್ಯತೆ ನವೀಕರಣ ಮತ್ತು ಸೀಟುಗಳ ಹೆಚ್ಚಳ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ನವದೆಹಲಿಯಲ್ಲಿಲ್ಲದ ಕಾರಣ ನಿರ್ಧಾರ ಪ್ರಕಟವಾಗಿಲ್ಲ. ಸಚಿವರ ಒಪ್ಪಿಗೆ ಪಡೆದು ಮಂಡಳಿಯು ನಿರ್ಧಾರ ಪ್ರಕಟಿಸಲಿದೆ. ಎಂದು ಮೂಲಗಳು ತಿಳಿಸಿವೆ.

ಇದೇ 20ರಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್ ಆರಂಭವಾಗಲಿದ್ದು, ಶುಕ್ರವಾರ ಎರಡನೇ ಹಂತದ ಸೀಟು ಹಂಚಿಕೆ ಪಟ್ಟಿ ಪ್ರಕಟವಾದರೆ ಮಾತ್ರ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಸುಮಾರು 700 ಸೀಟುಗಳು ಹೆಚ್ಚುವರಿಯಾಗಿ ಸೇರಲಿವೆ. ಇಲ್ಲದಿದ್ದರೆ ಎರಡನೇ ಸುತ್ತಿನ ಕೌನ್ಸೆಲಿಂಗ್‌ವರೆಗೂ ಕಾಯಬೇಕಾಗುತ್ತದೆ.

`ಯಾವುದೇ ಕಾರಣಕ್ಕೂ ಕೌನ್ಸೆಲಿಂಗ್ ಮುಂದೂಡುವುದಿಲ್ಲ, ಒಂದು ವೇಳೆ ಬಾಕಿ ಇರುವ ಕಾಲೇಜುಗಳ ಮಾನ್ಯತೆ ನವೀಕರಣ ವಿಳಂಬವಾದರೆ ಈಗ ಲಭ್ಯವಿರುವ ಸೀಟುಗಳಿಗೆ ಸೋಮವಾರದಿಂದ ಕೌನ್ಸೆಲಿಂಗ್ ಆರಂಭಿಸುತ್ತೇವೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳೆಗೆ ಉಳಿದ ಕಾಲೇಜುಗಳ ಸೀಟುಗಳು ಸೇರ್ಪಡೆಯಾಗಲಿವೆ~ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಶ್ಮಿ ವಿ.ಮಹೇಶ್ `ಪ್ರಜಾವಾಣಿ~ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.