ADVERTISEMENT

ಮಾವಳ್ಳಿಪುರ ಕೆರೆ ಮಣ್ಣಿಗೆ ಕನ್ನ: ದೂರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:44 IST
Last Updated 10 ಮಾರ್ಚ್ 2018, 19:44 IST
ಮಾವಳ್ಳಿಪುರ ಕೆರೆ ಮಣ್ಣಿಗೆ ಕನ್ನ: ದೂರು
ಮಾವಳ್ಳಿಪುರ ಕೆರೆ ಮಣ್ಣಿಗೆ ಕನ್ನ: ದೂರು   

ಬೆಂಗಳೂರು: ಹೆಸರಘಟ್ಟ ಹೋಬಳಿಯ ಮಾವಳ್ಳಿಪುರ ಗ್ರಾಮದ ಕೆರೆಯ ಮಣ್ಣನ್ನು ಹಾಡಹಗಲೇ ಅಗೆದು ಇಟ್ಟಿಗೆ ತಯಾರಿಸಲು ಮಣ್ಣು ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

‘ಗ್ರಾಮದ ಸರ್ವೆ ನಂ 116 ಹಾಗೂ 68 ಕೆರೆಯ ಜಾಗವಾಗಿದೆ. ಜಲಮೂಲದ ಮಣ್ಣನ್ನು ತೆಗೆದು ರೈತರ ಜಮೀನಿಗೆ ಹಾಕಲು ನಗರ ಜಿಲ್ಲಾ ಪಂಚಾಯಿತಿ ಆದೇಶಿಸಿದೆ ಎಂದು ಧನರಾಜ್ ಎಂಬುವರು ಪ್ರತಿಪಾದಿಸುತ್ತಿದ್ದಾರೆ. ಯಾವುದೇ ಆದೇಶ ಮಾಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗೆ ಬೋಗಸ್ ಅದೇಶವನ್ನು ಇಟ್ಟುಕೊಂಡು ಮಣ್ಣು ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ವಿನಂತಿಸಿದರು.

‘ಕೆರೆಯ ಮಣ್ಣನ್ನು ಮೂರೂವರೆ ಅಡಿಯಷ್ಟು ತೆಗೆದು ರೈತರ ಜಮೀನಿಗೆ ಹಾಕಲು ಧನರಾಜ್‌ಗೆ ಗ್ರಾಮ ಪಂಚಾಯಿತಿ 2014ರ ಜುಲೈ 2ರಂದು ಅನುಮತಿ ನೀಡಿತ್ತು. ಮಿತಿಗಿಂತ ಹೆಚ್ಚು ಮಣ್ಣು ತೆಗೆದ ಕಾರಣಕ್ಕೆ ಅದೇ ವರ್ಷದ ಡಿಸೆಂಬರ್‌ನಲ್ಲಿ ಅನುಮತಿ ರದ್ದುಪಡಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಲಾಗಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದರು.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿಜಯಾ, ‘ಮಣ್ಣನ್ನು ತೆಗೆಯಲು ಯಾರಿಗೂ ಅನುಮತಿ ನೀಡಿಲ್ಲ. ಟೆಂಡರ್‌ ಕರೆದೇ ಕೆರೆಯ ಮಣ್ಣು ಮತ್ತು ಹೂಳು ತೆಗೆಯಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡುತ್ತೇವೆ’ ಎಂದರು.

ಶಿವಕೋಟೆಯ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶೈಲಜಾ,‘ಮಣ್ಣು ತೆಗೆಯಬಾರದು ಎಂದು ಗ್ರಾಮ ಪಂಚಾಯಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಹೈಕೋರ್ಟ್‌ ವಕೀಲ ಮಂಜುನಾಥ್, ‘ಜಲಮೂಲದ ಮಣ್ಣು ತೆಗೆಯದಂತೆ ಹೈಕೋರ್ಟ್‌ ವರ್ಷದ ಹಿಂದೆ ಆದೇಶಿಸಿದೆ. ಈಗ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದ’ ಎಂದರು.

‘ದಿನಕ್ಕೆ 10–12 ಲೋಡ್‌ ಮಣ್ಣು ತೆಗೆಯುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.