ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನೇಮಕಾತಿಯಲ್ಲಿ ನಡದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ ರಾಜ್ಯ ಸರ್ಕಾರ ಕಳುಹಿಸಿರುವ ಪ್ರಸ್ತಾವದ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯಪಾಲರು ಮುಕ್ತ ವಿ.ವಿ ಕುಲಪತಿಗೆ ಸೂಚಿಸಿದ್ದಾರೆ.
ಮುಕ್ತ ವಿ.ವಿ ಬೋಧಕರ ಹುದ್ದೆಗಳ ಭರ್ತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ವಿಧಾನಮಂಡಲ ಅಧಿವೇಶನದಲ್ಲೇ ಕೆಲವು ಶಾಸಕರು ಈ ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು.
ತನಿಖೆಗೆ ಆದೇಶಿಸುವ ಸಂಬಂಧ ಇತ್ತೀಚೆಗೆ ರಾಜ್ಯಪಾಲರಿಗೆ ಸರ್ಕಾರ ಕಡತ ರವಾನಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಕ್ತ ವಿ.ವಿ ಕುಲಪತಿ ಎಂ.ಜಿ.ಕೃಷ್ಣನ್ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.