ADVERTISEMENT

ಮುಚ್ಚಿದರೂ ಬಾಯ್ತೆರೆಯುತ್ತಿವೆ ಗುಂಡಿಗಳು!

ಗುಂಡಿ ಮುಚ್ಚಲು ಪ್ರತಿ ವರ್ಷ ನೂರಾರು ಕೋಟಿ ಹಣ ಖರ್ಚು *ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಗುಂಡಿಗಳದ್ದೇ ಕಾರುಬಾರು

ಆರ್‌.ಜೆ.ಯೋಗಿತಾ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST
ಎಸ್‌ಜೆಪಿ ರಸ್ತೆಯಲ್ಲಿ ಸುಮಾರು ಅರ್ಧ ಅಡಿ ಆಳ ನಿರ್ಮಾಣವಾಗಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ
ಎಸ್‌ಜೆಪಿ ರಸ್ತೆಯಲ್ಲಿ ಸುಮಾರು ಅರ್ಧ ಅಡಿ ಆಳ ನಿರ್ಮಾಣವಾಗಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ   

ಬೆಂಗಳೂರು: ರಸ್ತೆ ನಿರ್ಮಾಣವಲ್ಲ ಕೇವಲ ಗುಂಡಿಗಳನ್ನು ಮುಚ್ಚುವುದಕ್ಕೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರತಿ ವರ್ಷ ನೂರಾರು ಕೋಟಿ ತೆರಿಗೆ ಹಣ ಖರ್ಚು ಮಾಡುತ್ತದೆ. ಆದರೆ, ಮುಚ್ಚಿದ ಕೆಲವು ದಿನಗಳಲ್ಲೇ ಗುಂಡಿಗಳು ಯಥಾಪ್ರಕಾರ ಬಾಯ್ದೆರೆದು ಕುಳಿತಿರುತ್ತವೆ!

ಪ್ರಮುಖ ರಸ್ತೆಗೆ ಒಳಪಡುವ ಮೈಸೂರು ರಸ್ತೆಯ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಉಂಟಾಗಿರುವ ಗುಂಡಿಗಳಿಂದ ಈಗಾಗಲೇ ಐದಾರು ಮಂದಿ ಬಲಿಯಾಗಿದ್ದಾರೆ.

‘ಕೇವಲ 2.65 ಕಿ.ಮೀ ಉದ್ದದ ಮೇಲ್ಸೇತುವೆಯಲ್ಲಿನ ಸುಮಾರು 20 ಗುಂಡಿಗಳೇ ಇಷ್ಟು ಜನರನ್ನು ಬಲಿಪಡೆದರೆ, ನಗರದ ಇತರೆ ರಸ್ತೆಗಳಲ್ಲಿ ಇದಕ್ಕಿಂತಲೂ ಕೆಟ್ಟದಾಗಿರುವ ಗುಂಡಿಗಳಿಂದ ಅದೆಷ್ಟು ಮಂದಿ ಮೃತಪಟ್ಟಿದ್ದಾರೊ ತಿಳಿಯದು’ ಎಂದು ನಿತ್ಯ ಈ ಮೇಲ್ಸೇತುವೆ ಮೇಲೆ ಸಂಚರಿಸುವ ಫಾಲ್ಗುಣಾ ಆತಂಕ ವ್ಯಕ್ತಪಡಿಸಿದರು.

ADVERTISEMENT

2013ರಲ್ಲಿ ಸ್ಯಾನ್‌ ಫೀಲ್ಡ್‌ ಇಂಡಿಯಾ ಕಂಪೆನಿ ₹2.65 ಕೋಟಿ ವೆಚ್ಚದಲ್ಲಿ ಈ ಮೇಲ್ಸೇತುವೆಯ ದುರಸ್ತಿ ಕಾಮಗಾರಿ ನಡೆಸಿತ್ತು. ಆದಾದ ನಂತರ ಮೇಲಿಂದ ಮೇಲೆ ಬೀಳುವ ಗುಂಡಿಗಳಿಗೆ ಬಿಬಿಎಂಪಿ ಸಾಕಷ್ಟು ಬಾರಿ ತೇಪೆ ಹಾಕಿದೆ.
ಹೀಗೆ ಹಾಕಿದ ತೇಪೆ ಕಾಮಗಾರಿಯಿಂದ ಗುಂಡಿ ಇದ್ದ ಕಡೆ ರಸ್ತೆ ಅರ್ಧ ಅಡಿ ಎತ್ತರವಾಗುತ್ತದೆ. ಇದರಿಂದ ದ್ವಿಚಕ್ರ ವಾಹನಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ಮೇಲ್ಸೇತುವೆಯಿಂದ ಇಳಿದ ನಂತರವಾದರೂ ಉತ್ತಮ ರಸ್ತೆ ಇದೆ ಎಂದು ಸಮಾಧಾನ ಪಡುವಂತಿಲ್ಲ. ರಸ್ತೆ ಅಗಲವಿದ್ದರೂ ಸುಗಮ ಸಂಚಾರ ಮಾತ್ರ ಸಾಧ್ಯವಾಗುವುದಿಲ್ಲ. ಅಲ್ಲಿಂದ ಕೆಂಗೇರಿಗೆ ಸಾಗುವಷ್ಟು ದೂರಕ್ಕೂ ಗುಂಡಿಗಳು ನಿಮ್ಮನ್ನು ಸ್ವಾಗತಿಸುತ್ತವೆ.

‘ಇದೇ ರಸ್ತೆ­ಯನ್ನೇ ಬಳಸಿ ನಿತ್ಯ ಕಾಲೇಜಿಗೆ ಹೋಗಬೇಕಾ­ಗಿದೆ. ಹೊಂಡಗಳಿರುವ ಈ ರಸ್ತೆಯಲ್ಲಿ ವಾಹನ ಓಡಿಸಿ ತೀವ್ರ ಬೆನ್ನು ನೋವು ಕಾಣಿಸಿ­ಕೊಂಡಿದೆ’ ಎಂದು ಸುಹಾಸ್‌ ಹೇಳಿದರು.

ಗುತ್ತಿಗೆದಾರನೊಬ್ಬ ಕಾಮಗಾರಿ ವಹಿಸಿಕೊಂಡು ಯಾವುದೇ ರಸ್ತೆಗೆ ಮರು ಡಾಂಬರೀಕರಣ ಮಾಡಿದರೆ ಮುಂದಿನ ಮೂರು ವರ್ಷಗಳ ಕಾಲ ಆ ರಸ್ತೆಯನ್ನು ನಿರ್ವಹಣೆ ಮಾಡಬೇಕೆಂಬ ಷರತ್ತು ಇರುತ್ತದೆ. ಆದರೆ, ಕಾಮಗಾರಿ ಮುಗಿದು ಮರುವಾರವೇ ಗುಂಡಿ ಬಿದ್ದರೂ ಪಾಲಿಕೆ ಖರ್ಚಿನಲ್ಲಿ ಎಂಜಿನಿಯರ್‌ಗಳು ಅದನ್ನು ಮುಚ್ಚಿಸುತ್ತಿದ್ದಾರೆ.

‘ಐದು ವರ್ಷಗಳಲ್ಲಿ ಪ್ರಮುಖ ರಸ್ತೆಗಳಿಗೆ ಟಾರು ಹಾಕಲು ಪಾಲಿಕೆ ಹೆಚ್ಚು–ಕಡಿಮೆ ಸಾವಿರ ಕೋಟಿ ರೂಪಾಯಿ ವ್ಯಯಿಸಿದೆ. ಆದರೆ, ಗುಂಡಿಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಗುತ್ತಿಗೆದಾರರ ಮಾಫಿಯಾ ಇದಕ್ಕೆ ಪ್ರಮುಖ ಕಾರಣ’ ಎಂದು ಸಂಚಾರ ಪೊಲೀಸರೊಬ್ಬರು ತಿಳಿಸಿದರು.

‘ಗುತ್ತಿಗೆದಾರರು ಟಾರು ಮಿಶ್ರಣದಲ್ಲಿ ದುಬಾರಿ ರಾಸಾಯನಿಕ ಬದಲಾಗಿ ಸೀಮೆಎಣ್ಣೆ ಬಳಸುತ್ತಾರೆ. ಇದರಿಂದ ಅದರ ಗುಣಮಟ್ಟ ಕಡಿಮೆಯಾಗುತ್ತದೆ. ಮಳೆ ಬಂದಾಗ ಸೀಮೆಎಣ್ಣೆ ಅಂಶ ಸುಲಭವಾಗಿ ಬಿಟ್ಟುಕೊಳ್ಳುತ್ತದೆ. ಹಾಗಾಗಿ ಡಾಂಬರೀಕರಣ ಮಾಡಿದ ಎರಡು–ಮೂರು ದಿನಗಳಲ್ಲೇ ಟಾರು ಕಿತ್ತು ಬರುತ್ತದೆ. ಪಾಲಿಕೆಯವರು ಈ ಬಗ್ಗೆಯೂ ನಿಗವಹಿಸಬೇಕು’ ಎಂದು ಸಂಚಾರ ಠಾಣೆ ಪಿಎಸ್‌ಐ ಡಿ.ಜಿ. ರಾಮಚಂದ್ರಯ್ಯ ತಿಳಿಸಿದರು.

‘ರಸ್ತೆ ನಿರ್ಮಾಣವಲ್ಲದೆ, ಗುಂಡಿಗಳ ದುರಸ್ತಿಗೆ ನಮ್ಮ ತೆರಿಗೆ ಹಣದ ದುರುಪಯೋಗವಾಗುತ್ತಿರುವುದು ಒಂದೆಡೆಯಾದರೆ, ಗುಂಡಿಗಳಿಂದ ಮಾಲಿನ್ಯ, ವಾಹನಗಳ ದುರಸ್ತಿ, ಇಂಧನದ ಪೋಲು, ಸಮಯಪಾಲನೆ ಒತ್ತಡ, ಹದಗೆಡುವ ಆರೋಗ್ಯ ಮೊದಲಾದವುಗಳ ದೂರಗಾಮಿ ಪರಿಣಾಮವನ್ನು ನಾವು ಎದುರಿಸಬೇಕಾಗಿದೆ’ ಎಂದು ಹಿರಿಯ ನಾಗರೀಕರಾದ ಕೃಷ್ಣಯ್ಯ ಅಭಿಪ್ರಾಯಪಟ್ಟರು.

(ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ರಸ್ತೆ ಹದಗೆಟ್ಟಿರುವುದು)

ಸಂಚಾರ ದಟ್ಟಣೆ: ಕೆ.ಆರ್‌. ಮಾರುಕಟ್ಟೆಯಿಂದ ಪುರಭವನಕ್ಕೆ ಹೋಗುವ ಎಸ್‌ಜೆಪಿ ರಸ್ತೆಯಲ್ಲಿ ಅರ್ಧ ಅಡಿಯ ಐದಾರು ಗುಂಡಿಗಳು ಬಿದ್ದಿವೆ. ಅಲ್ಲದೆ, ಪುರಭವನ ಬಸ್‌ನಿಲ್ದಾಣದ ಬಳಿ ನಿರ್ಮಿಸಿರುವ ಪಾದಚಾರಿಗಳ ಕೆಳಸೇತುವೆಯಲ್ಲಿ ತುಂಬಿದ್ದ ನೀರನ್ನು ರಸ್ತೆಗೆ ಹರಿಸಲಾಗಿದ್ದರಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರಿಂದ ಅಲ್ಲಿ ಸಾಕಷ್ಟು ದಟ್ಟಣೆ ಉಂಟಾಗಿತ್ತು.

‘ಇಲ್ಲಿರುವ ಗುಂಡಿಗಳಿಂದ ಸಾಕಷ್ಟು ಸಂಚಾರ ದಟ್ಟಣೆ ಉಂಟಾಗುತ್ತದೆ. ಶೀಘ್ರ ಗುಂಡಿಗಳನ್ನು ಮುಚ್ಚಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ’ ಎಂದು ಸಂಚಾರ ಪೊಲೀಸ್‌ ಮಧುಸೂದನ್‌ ತಿಳಿಸಿದರು.

‘ಹೆದ್ದಾರಿಗಳು ಚೆನ್ನಾಗಿಯೇ ಇವೆಯಲ್ಲ’: ‘ನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳಲ್ಲೂ ವಾಹನ ಓಡಾಟ ಹೆಚ್ಚಾಗಿಯೇ ಇದೆ. ಆದರೆ, ಅವು ಗಟ್ಟಿಮುಟ್ಟಾಗಿವೆ. ಅದೇ ನಗರದ ರಸ್ತೆಗಳು ಮಾತ್ರ ಗುಂಡಿಗಳಿಂದ ತುಂಬಿಕೊಂಡಿವೆ. ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಸಾರಿಗೆ ತಜ್ಞ ಎಂ.ಎನ್‌. ಶ್ರೀಹರಿ ತಿಳಿಸಿದರು.

‘ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲು ಅಗತ್ಯವಾದ ಎಲ್ಲ ತಂತ್ರಜ್ಞಾನವೂ ದೇಶದಲ್ಲಿ ಲಭ್ಯವಿದೆ. ಒಂದೊಮ್ಮೆ ವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಿಸಿದರೆ ಕನಿಷ್ಠ ಐದು ವರ್ಷ ಬಾಳಿಕೆ ಬರುತ್ತವೆ. ಅದಕ್ಕಿಂತ ಬೇಗ ರಸ್ತೆ ಹಾಳಾದರೆ ಕಳಪೆ ಕಾಮಗಾರಿಯಲ್ಲದೆ ಬೇರೆ ಕಾರಣವೇ ಇರಲಾರದು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದಂತೆ ರಸ್ತೆ ನಿರ್ಮಾಣ ಮಾಡುವುದು ಗುಂಡಿಗಳು ನಿರ್ಮಾಣವಾಗುವುದಕ್ಕೆ ಕಾರಣ’ ಎಂದರು.

ಗುಂಡಿ ಮುಚ್ಚಿಸಲು ₹2.73 ಕೋಟಿ ಟೆಂಡರ್‌

ನಗರೋತ್ಥಾನ ಯೋಜನೆ, ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಮತ್ತು ಸರೋವರ ಅಭಿವೃದ್ಧಿ ಯೋಜನೆಯಡಿ ಬಿಬಿಎಂಪಿ 2016–17 ಮತ್ತು 2017–18ನೇ ಸಾಲಿನಲ್ಲಿ ಮುಖ್ಯ ಹಾಗೂ ಉಪ ರಸ್ತೆಗಳ ಗುಂಡಿಗಳನ್ನು ಮುಚ್ಚಲು ₹2.73 ಕೋಟಿ ವೆಚ್ಚದಲ್ಲಿ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಎಂಡ್‌ ಸಲ್ಯೂಷನ್ಸ್‌ ಪ್ರೈ. ಲಿ. ಗೆ ವಾರ್ಷಿಕ ಟೆಂಡರ್‌ ನೀಡಿದೆ.

ಗುಂಡಿಗಳನ್ನು ಹೇಗೆ ಮುಚ್ಚಬೇಕು?

ರಸ್ತೆಗಳ ಗುಂಡಿ ಮುಚ್ಚುವುದು, ದುರಸ್ತಿ ಹಾಗೂ ನಿರ್ವಹಣೆ ಮಾಡುವುದಕ್ಕಾಗಿ ಭಾರತೀಯ ರಸ್ತೆ ಕಾಂಗ್ರೆಸ್‌ನಲ್ಲಿ ಸ್ಪಷ್ಟವಾದ ನಿಯಮಾವಳಿಯೇ ಇದೆ.

ಮೊದಲು ರಸ್ತೆಯನ್ನು ಶಿಥಿಲಗೊಳಿಸಿದ ಮತ್ತು ಸಡಿಲಗೊಂಡ ಎಲ್ಲ ಸಾಮಗ್ರಿಯನ್ನು ಅಲ್ಲಿಂದ ತೆರವುಗೊಳಿಸಬೇಕು. ಗುಂಡಿಗಳ ಮೂಲದವರೆಗೆ ಎಲ್ಲ ಕಲ್ಮಶವನ್ನು ಸ್ವಚ್ಛಗೊಳಿಸಬೇಕು. ರಸ್ತೆಯನ್ನು ನಿರ್ಮಿಸುವಾಗ ಬಳಸಿದ ಸಾಮಗ್ರಿಗಿಂತ ಗುಂಡಿಯನ್ನು ಮುಚ್ಚಲು ಬಳಸುವ ಸಾಮಗ್ರಿ ಹೆಚ್ಚಿನ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗೆ ತುಂಬಿದ ಸಾಮಗ್ರಿ ಯಾವುದೇ ಕಾರಣಕ್ಕೂ ರಸ್ತೆ ಮೇಲ್ಮೈಗಿಂತ ಮೇಲೆ ಇಲ್ಲವೆ ಕೆಳಗೆ ಇರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಜನರ ಅಭಿಪ್ರಾಯ

ನಾಯಂಡಹಳ್ಳಿ ಜಂಕ್ಷನ್‌ ಬಳಿ ರಸ್ತೆಯೇ ಇಲ್ಲ ಕೇವಲ ಗುಂಡಿಗಳು. ಅಲ್ಲಿಂದ ಮೆಟ್ರೊ ನಿಲ್ದಾಣದ ಬಳಿ ಸಾಗುವಾಗ ದೊಡ್ಡದೊಂದು ಗುಂಡಿ ಬಿದ್ದಿದೆ. ವೇಗವಾಗಿ ಬರುತ್ತಿದ್ದಾಗ ಈ ಗುಂಡಿ ಬಳಿ ಬ್ರೇಕ್‌ ಹಾಕಿದರೆ ಹಿಂದಿನಿಂದ ಯಾವ ವಾಹನ ಗುದ್ದುತ್ತದೆಯೊ ಎನ್ನುವ ಭಯ ಆಗುತ್ತದೆ. ಏಕೆಂದರೆ ಹಿಂದೊಮ್ಮೆ ಆ ರೀತಿ ಕಹಿ ಘಟನೆ ನಡೆದಿತ್ತು

–ನಾರಾಯಣ, ಬಿಎಚ್ಇಎಲ್ ಕೈಗಾರಿಕೆ ಉದ್ಯೋಗಿ

ಮೈಸೂರು ರಸ್ತೆ ಒಂದು ಕಡೆ ಚೆನ್ನಾಗಿದ್ದರೆ ಮತ್ತೊಂದು ಕಡೆ ಗುಂಡಿಗಳು ಬಿದ್ದಿವೆ. ಸುಗಮ ಸಂಚಾರ ಈ ನಗರದಲ್ಲಿ ಕನಸು ಮಾತ್ರ. ಮೇಯರ್‌ ದಿನ ನಗರ ಸಂಚಾರ ಮಾಡಿದರೆ, ಜನರ ಕಷ್ಟ ಅರಿವಾಗುತ್ತದೆ.

–ಮಹದೇವಯ್ಯ, ದೀಪಾಂಜಲಿನಗರ ನಿವಾಸಿ

(ಬಿಎಚ್ಇಎಲ್ ಕೈಗಾರಿಕೆ ಬಳಿಯ ರಸ್ತೆಯಲ್ಲಿ 20 ಸೆಂ.ಮೀನಷ್ಟು ಆಳದ ಗುಂಡಿ ಬಿದ್ದಿರುವುದನ್ನು ಅಳತೆ ಸ್ಕೇಲ್‌ನಲ್ಲಿ ಗಮನಿಸಬಹುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.