ADVERTISEMENT

ಮುಚ್ಚಿದ ಸಮುದಾಯ ಭವನ: ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 11:10 IST
Last Updated 29 ಡಿಸೆಂಬರ್ 2010, 11:10 IST

ಕೃಷ್ಣರಾಜಪುರ: ವಾರ್ಡ್ ವ್ಯಾಪ್ತಿಯ ವಿಭೂತಿಪುರ ಸಮುದಾಯ ಭವನಕ್ಕೆ ಎರಡು ವರ್ಷಗಳಿಂದ ಬೀಗ ಜಡಿಯಲಾಗಿದ್ದು, ಸಮುದಾಯದ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.‘ಭವನಕ್ಕೆ ಬೀಗ ಹಾಕಿರುವುದರಿಂದ ಇಲ್ಲಿ ಇಡಲಾಗಿರುವ ಹೊಲಿಗೆ ಯಂತ್ರಗಳಿಗೆ ಹಾಗೂ ಕಂಪ್ಯೂಟರ್‌ಗಳಿಗೆ ದೂಳು ಹಿಡಿದಿದೆ. ಈ ಯಂತ್ರಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ’ ಎಂದು ಅವರು ದೂರಿದ್ದಾರೆ.

‘ಈ ಅವ್ಯವಸ್ಥೆಯನ್ನು ಸರಿಪಡಿಸಿ, ಇಲ್ಲಿ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿ ತರಗತಿಗಳನ್ನು ಸದ್ಯದಲ್ಲಿಯೇ ನಡೆಸುವುದಾಗಿ ಪಾಲಿಕೆ ಸದಸ್ಯ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದುವರೆಗೆ ಈ ಮಾತು ಭರವಸೆಯಾಗಿಯೇ ಉಳಿದಿದೆ ಹೊರತು ಈಡೇರಿಲ್ಲ’ ಎಂದು ಸ್ಥಳೀಯ ವಾಸಿ ನಾಗೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುಂಚೆ ಇಲ್ಲಿ ಬಡ ಮಹಿಳೆಯರು ಹೊಲಿಗೆ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಇವರಲ್ಲಿ ಎಷ್ಟೋ ಮಹಿಳೆಯರು ಪರಿಣತಿ ಪಡೆದ ನಂತರ ಸ್ವಉದ್ಯೋಗ ಕೈಗೊಂಡ ಉದಾಹರಣೆಗಳೂ ಇವೆ ಎಂದು ಅವರು ನೆನಪಿಸಿಕೊಂಡರು.

‘ಒಂದು ವರ್ಷದ ಹಿಂದೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರಷ್ಟೇ, ಆದರೆ ಇದುವರೆಗೆ ಯಾವುದೇ ಪ್ರಗತಿ ಕಾಣಲಿಲ್ಲ. ಪ್ರತಿ ವಾರ್ಡಿಗೆ ಒಂದೊಂದು ಸಮುದಾಯ ಭವನ ಕಡ್ಡಾಯ ಎಂದು ಮೇಯರ್ ಆದೇಶಿಸಿದ್ದಾರೆ. 

 ಈ ಆದೇಶಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿರುವ ಸಮುದಾಯ ಭವನವನ್ನು ನಾಗರಿಕರು ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ. ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಿಸಿದವರಿಗೆ ದೂರು ನೀಡಿದರೂ ಫಲ ನೀಡಿಲ್ಲ’ ಎಂದರು .
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.