ADVERTISEMENT

`ಮೂಲ ತತ್ವಗಳ ಸಂಶೋಧನೆಗೆ ಅವಕಾಶ'

ಪ್ರೋಟೀನ್ ರಸಾಯನವಿಜ್ಞಾನ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2013, 20:07 IST
Last Updated 31 ಜನವರಿ 2013, 20:07 IST
ನಗರದಲ್ಲಿ ಗುರುವಾರ ನಡೆದ `ಪ್ರೋಟೀನ್ ವಿಜ್ಞಾನ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳು' ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ.ಶರ್ಮ, ಮೈಸೂರು ವಿವಿಯ ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಕೆಂಪರಾಜು, ಗುಲ್ಬರ್ಗ ವಿವಿಯ ಪ್ರಾಧ್ಯಾಪಕ ಪ್ರೊ.ಕೆ.ಶ್ರೀರಾಮುಲು, ಬೆಂಗಳೂರು ವಿವಿಯ ಜೀವರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಎಚ್. ಮಂಜುನಾಥ್ ಸಮಾಲೋಚಿಸಿದರು
ನಗರದಲ್ಲಿ ಗುರುವಾರ ನಡೆದ `ಪ್ರೋಟೀನ್ ವಿಜ್ಞಾನ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳು' ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಿ.ಶರ್ಮ, ಮೈಸೂರು ವಿವಿಯ ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಕೆಂಪರಾಜು, ಗುಲ್ಬರ್ಗ ವಿವಿಯ ಪ್ರಾಧ್ಯಾಪಕ ಪ್ರೊ.ಕೆ.ಶ್ರೀರಾಮುಲು, ಬೆಂಗಳೂರು ವಿವಿಯ ಜೀವರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಎಚ್. ಮಂಜುನಾಥ್ ಸಮಾಲೋಚಿಸಿದರು   

ಬೆಂಗಳೂರು: `ಪ್ರೋಟೀನ್ ರಸಾಯನವಿಜ್ಞಾನ ಕ್ಷೇತ್ರದಲ್ಲಿ ಈಗಲೂ ಮೂಲ ತತ್ವಗಳ ಸಂಶೋಧನೆಗೆ ಸಾಕಷ್ಟು ಅವಕಾಶ ಇದೆ' ಎಂದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಜೀವರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎನ್. ಎಚ್. ಮಂಜುನಾಥ್ ಅಭಿಪ್ರಾಯಪಟ್ಟರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹಾಗೂ ತುಮಕೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಗರದ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಗುರುವಾರ ನಡೆದ `ಪ್ರೋಟೀನ್ ವಿಜ್ಞಾನ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳು' ಕುರಿತ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಈ ಕ್ಷೇತ್ರ ಸಮುದ್ರವಿದ್ದಂತೆ. ಕಳೆದ ಆರು ದಶಕಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಅಗಾಧವಾದ ಮಾಹಿತಿಗಳು ದೊರಕಿವೆ. ಆದರೂ ಮೂಲ ತತ್ವಗಳು ಈಗಲೂ ಸಂಶೋಧನೆಗೆ ತೆರೆದುಕೊಂಡಿವೆ' ಎಂದರು.

ಆಧುನಿಕ ವಿಜ್ಞಾನ ಶಿಕ್ಷಣ ವ್ಯವಸ್ಥೆ ಜ್ಞಾನ ವಿಸ್ತಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಅಂಶಕ್ಕೆ ಮಾತ್ರ ಗಮನ ಹರಿಸುತ್ತಿರುವುದು ಕಳವಳಕಾರಿ. ಜ್ಞಾನದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸುವುದು ಅಗತ್ಯ. ಈ ನಿಟ್ಟಿನಲ್ಲಿ ಪಠ್ಯಕ್ರಮ ವ್ಯವಸ್ಥೆಯ ಬದಲಾವಣೆಯತ್ತಲೂ ಗಮನ ಹರಿಸಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯದ ಜೀವರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಕೆಂಪರಾಜು, ರೋಗ ನಿರೋಧಕ, ಔಷಧಗಳು ಹಾಗೂ ಅರಿವಳಿಕೆ ಸೇರಿದಂತೆ ಜೀವ ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಪರಿಣಾಮಕಾರಿ ಸಂಶೋಧನೆಯ ಫಲವಾಗಿ ಇಂದು ಮನುಷ್ಯನ ಜೀವಿತ ಅವಧಿ ಜಾಸ್ತಿ ಆಗಿದೆ. ಅರಿವಳಿಕೆಯ ನೆರವಿನಿಂದ ಹಾನಿಗೀಡಾದ ಅಂಗಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖರನ್ನಾಗಿ ಮಾಡಲಾಗುತ್ತಿದೆ. ಜೀವಿತದ ಅವಧಿ ಹೆಚ್ಚಾದ ಕಾರಣ ಮಾನವನ ಜೀವನ ವಿಧಾನ ಶೈಲಿಯೇ ಸಂಪೂರ್ಣ ಬದಲಾಗಿದೆ' ಎಂದರು.  

ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಕೆ.ಎಂ. ಕಾವೇರಿಯಪ್ಪ ಮಾತನಾಡಿ, `ಪಠ್ಯಕ್ರಮದ ಪುನರವಲೋಕನ ಮಾಡಿ ವಿದ್ಯಾರ್ಥಿಗಳ ಸಾಮರ್ಥ್ಯ ವೃದ್ಧಿಗೆ ಆದ್ಯತೆ ನೀಡಬೇಕಿದೆ. ಇಂಟರ್‌ನೆಟ್ ಸೇರಿದಂತೆ ವಿವಿಧ ಮೂಲಗಳಿಂದ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತಿದ್ದು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು' ಎಂದು ಕಿವಿಮಾತು ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ಸಿ.ಶರ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.