ADVERTISEMENT

ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು-ಸಿ.ಎಂ

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು-ಸಿ.ಎಂ
ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು-ಸಿ.ಎಂ   

ಬೆಂಗಳೂರು: `ಬೆಂಗಳೂರು ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಸೋಮವಾರ ನಗರದ ಮತ್ತಿಕೆರೆ ಬಳಿಯ ಜಯಪ್ರಕಾಶ ನಾರಾಯಣ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿರುವ ಆಧುನಿಕ ಈಜುಕೊಳ ಹಾಗೂ ಸಂಗೀತ ನೃತ್ಯ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಮೂರು ವರ್ಷಗಳಿಂದ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬಂದಿದೆ. ನಗರದ 11 ಕೆರೆಗಳನ್ನು ಈಗಾಗಲೇ ಉನ್ನತೀಕರಿಸಲಾಗಿದ್ದು, ಇನ್ನೂ 22 ಕೆರೆಗಳ ನವೀಕರಣ ಕಾರ್ಯ ನಡೆಯುತ್ತಿದೆ. ನಗರದ ಎಲ್ಲಾ ಬಡಾವಣೆಗಳ ರಸ್ತೆಗಳನ್ನು ಉನ್ನತೀಕರಿಸಲಾಗುತ್ತಿದ್ದು, ಇದುವರೆಗೂ ನಗರದ 220 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಉದ್ಯಾನವನಗಳ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಉತ್ತಮ ಬೆಂಗಳೂರು ನಗರದ ನಿರ್ಮಾಣ ಸರ್ಕಾರದ ಗುರಿ~ ಎಂದು ಅವರು ತಿಳಿಸಿದರು.

`ನಗರದ ಮೂರನೇ ದೊಡ್ಡ ಉದ್ಯಾನವನವಾಗಿ ಜೆಪಿ ಪಾರ್ಕ್ ಅನ್ನು ರೂಪಿಸಲಾಗಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳು ಮುಂದಿನ ಉದ್ಯಾನ ನಿರ್ಮಾಣ ಕೆಲಸಗಳಿಗೆ ಮಾದರಿಯಂತಿವೆ. ಕೇವಲ ಉದ್ಯಾನವನಗಳ ನಿರ್ಮಾಣ ಮಾತ್ರ ಸಾಲದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮತ್ತು ನಿರ್ವಹಿಸುವ ಜವಾಬ್ದಾರಿ ಸಾರ್ವಜನಿಕರ ಮೇಲಿದೆ~ ಎಂದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಮಾತನಾಡಿದರು. ಗೃಹ ಸಚಿವ ಆರ್.ಅಶೋಕ್, ಬಿಬಿಎಂಪಿ ಮೇಯರ್ ಶಾರದಮ್ಮ, ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.