ADVERTISEMENT

ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನಾ ಆಯೋಗ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST
ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನಾ ಆಯೋಗ ಆಸಕ್ತಿ
ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನಾ ಆಯೋಗ ಆಸಕ್ತಿ   

ಬೆಂಗಳೂರು: `ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಬಗ್ಗೆ ಯೋಜನಾ ಆಯೋಗವು ಆಸಕ್ತಿ ತಳೆದಿದೆ~ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಡಾ.ಕೌಶಿಕ್ ಬಸು ತಿಳಿಸಿದರು.

ರಾಜಭವನದಲ್ಲಿ ಮಂಗಳವಾರ ನಡೆದ ಡಾ.ವಿ.ಕೆ.ಆರ್.ವಿ. ರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ` `ಭಾರತೀಯ ಅರ್ಥವ್ಯವಸ್ಥೆ: ಸಾಮಾಜಿಕ ಮತ್ತು ನೈತಿಕ ಅಡಿಪಾಯದ ಮೇಲೆ ನೆಲೆಗೊಂಡ ಅಭಿವೃದ್ಧಿ~ ಕುರಿತು ಉಪನ್ಯಾಸ ನೀಡಿದರು.`ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಇಂಧನ ಮತ್ತು ನೀರಾವರಿ ಸೌಲಭ್ಯವನ್ನು ಸಮರ್ಪಕವಾಗಿ ರೈತರಿಗೆ ಒದಗಿಸಿ ಕೃಷಿ ವಲಯಕ್ಕೆ ಉತ್ತೇಜನ ನೀಡುವತ್ತ ಈಗಾಗಲೇ ಚಿಂತನೆ ನಡೆಸಲಾಗಿದೆ~ ಎಂದು ಹೇಳಿದರು.

`ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲ ತೈಲ ಕಂಪೆನಿಗಳಿಗೂ ಸಮಾನ ಅವಕಾಶ ನೀಡುವ ಮೂಲಕ ವಿಕೇಂದ್ರೀಕರಣ ಸೂತ್ರವನ್ನು ಹಂತ ಹಂತವಾಗಿ ಜಾರಿಗೆ ತರಬೇಕು. ಆಗ ಮಾತ್ರ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ~ ಎಂದು ಅಭಿಪ್ರಾಯಪಟ್ಟರು.
 
`ಪ್ರಸ್ತುತ ದಿನಗಳಲ್ಲಿ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಸುಧಾರಣೆ ತರಲು ಅವಕಾಶಗಳಿವೆ. ಆದರೆ, ಈ ಅವಕಾಶಗಳನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿಕೊಳ್ಳಬೇಕು. 2004ರಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ 9.5 ರಷ್ಟಿತ್ತು. 2011ನೇ ಸಾಲಿಗೆ ಶೇ 6.1ರಷ್ಟಿದ್ದ ದರವು ಮೂರು ತಿಂಗಳಿನಲ್ಲಿ ಶೇ 5.7ಕ್ಕೆ ಇಳಿದಿದೆ.

`ಬ್ರಿಕ್~ ರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ 9.2 ಹೊಂದಿರುವ ಚೀನಾ ಮೊದಲನೇ ಸ್ಥಾನದಲ್ಲಿದ್ದರೆ, ಶೇ 5.7 ಹೊಂದಿರುವ ಭಾರತ ಎರಡನೇ ಸ್ಥಾನ ಪಡೆದಿದೆ. `ಜಿ-20~ ರಾಷ್ಟ್ರಗಳಲ್ಲೂ ಚೀನಾ ಮತ್ತು ಭಾರತ ಇದೇ ಸ್ಥಾನವನ್ನು ಕಾಯ್ದುಕೊಂಡಿದೆ~ ಎಂದು ಹೇಳಿದರು.

`ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಕೃಷಿ ಚಟುವಟಿಕೆಗಳಲ್ಲಿನ ವೈಫಲ್ಯ ಮಾತ್ರ ಕಾರಣವಲ್ಲ. ರೈತ ಸಾಮಾಜಿಕ ಸಮಸ್ಯೆಗಳಿಗಾಗಿ ಬಹುದೊಡ್ಡ ಮೊತ್ತದ ಸಾಲ ಪಡೆಯುತ್ತಿರುವುದು ಕೂಡ ಆತ್ಮಹತ್ಯೆಯಂತಹ ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತಿದೆ. ದೇಶದ ವಾಣಿಜ್ಯ ವ್ಯವಹಾರಗಳು ಸಾಮಾಜಿಕ ಮತ್ತು ನೈತಿಕ ಬದ್ಧತೆಯೊಂದಿಗೆ ನಡೆದಾಗ ಮಾತ್ರ ಆರ್ಥಿಕ ವಲಯದಲ್ಲಿ ಅಭಿವೃದ್ಧಿ ಸಾಧ್ಯವಿದೆ~ ಎಂದು ಹೇಳಿದರು.

ರಾಜ್ಯಪಾಲ ಎಚ್.ಆರ್.ಭಾರದ್ವಾಜ್, `ಪ್ರಸ್ತುತ ದಿನಗಳಲ್ಲಿ ವಿದೇಶಿ ಹೂಡಿಕೆದಾರರು ದೇಶದಲ್ಲಿ ಬಂಡವಾಳ ಹೂಡಲು ಬಹಳ ಉತ್ಸುಕತೆ ತೋರುತ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿಯ ಮೂಲಕ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು~ ಎಂದು ಕರೆ ನೀಡಿದರು. `ಐಸೆಕ್~ನ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.