ADVERTISEMENT

ಮೂಲ ಸ್ವರೂಪ ಉಳಿಸಲು ನಿರ್ಧಾರ

ವಸಂತಪುರದ ವಸಂತ ವಲ್ಲಭಸ್ವಾಮಿ ದೇವಸ್ಥಾನದ ಕಲ್ಯಾಣಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 20:24 IST
Last Updated 9 ಜೂನ್ 2017, 20:24 IST
ಮೂಲ ಸ್ವರೂಪ ಉಳಿಸಲು ನಿರ್ಧಾರ
ಮೂಲ ಸ್ವರೂಪ ಉಳಿಸಲು ನಿರ್ಧಾರ   

ಬೆಂಗಳೂರು: ವಸಂತಪುರದ ವಸಂತ ವಲ್ಲಭಸ್ವಾಮಿ ದೇವಸ್ಥಾನದ ಕಲ್ಯಾಣಿ ಯನ್ನು ಮೂಲಸ್ವರೂಪದಲ್ಲಿ ಉಳಿಸಿ ಕೊಳ್ಳಲು ಮುಜರಾಯಿ ಇಲಾಖೆ ನಿರ್ಧರಿಸಿದೆ.

‘ಅಭಿವೃದ್ಧಿಯಿಂದಾಗಿ ಕಲ್ಯಾಣಿಯ ಮೂಲರೂಪಕ್ಕೆ ಧಕ್ಕೆ ಆಗಲಿದೆ. ಜಲ ಮೂಲದ ಬದಿಯಲ್ಲಿ ರಸ್ತೆ ನಿರ್ಮಿಸಿ ಖಾಸಗಿ ಬಿಲ್ಡರ್‌ಗಳಿಗೆ ಅನುಕೂಲ ಮಾಡಿ ಕೊಡಲಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದರು.

ಅದರ ಅಭಿವೃದ್ಧಿಗಾಗಿ ಇನ್ಫೊಸಿಸ್‌್ ಪ್ರತಿಷ್ಠಾನ ಇತ್ತೀಚೆಗೆ ಧನಸಹಾಯ ನೀಡಿತ್ತು. 350 ವರ್ಷಗಳ ಹಳೆಯ ಈ ಕಲ್ಯಾಣಿಯನ್ನು ಛತ್ರಪತಿ ಶಿವಾಜಿ ಅವರ ತಂದೆ ಶಹಾಜಿ ಭೋಂಸ್ಲೆ ಕಟ್ಟಿಸಿದ್ದಾರೆ ಎಂದು ಉಲ್ಲೇಖವಿದೆ.

ADVERTISEMENT

ಇದರ ಅಭಿವೃದ್ಧಿಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಯಿಂದ ವರದಿ ಕೇಳಿತ್ತು. ಇದೀಗ ಇಲಾಖೆ ಕಲ್ಯಾಣಿಯ ನೀರು ಸಂಗ್ರಹ ಪ್ರದೇಶ ಮಾತ್ರವಲ್ಲದೆ, ವಾರ್ಷಿಕ ಆಚರಣೆಯಾದ ತೆಪ್ಪೋತ್ಸವ ನಡೆಸಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್‌.ಕಾಂತರಾಜು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

‘ಅಭಿವೃದ್ಧಿ ಕಾರ್ಯದಿಂದ ಕಲ್ಯಾ ಣಿಯ ನೀರು ಸಂಗ್ರಹ ಪ್ರದೇಶ ಕಡಿಮೆ ಯಾಗಲಿದೆ. ಆದ್ದರಿಂದ ಉದ್ಯಾನ, ನಡಿಗೆಪಥ ನಿರ್ಮಾಣ ಮತ್ತು ಕಲ್ಲು ಬೆಂಚುಗಳನ್ನು ಹಾಕದಂತೆ ತಿಳಿಸಿದ್ದೇನೆ’ ಎಂದು ಕಾಂತರಾಜು ತಿಳಿಸಿದರು.

‘ಕಂದಾಯ ದಾಖಲೆಗಳ ಪ್ರಕಾರ ಕಲ್ಯಾಣಿ 1 ಎಕರೆ 33 ಗುಂಟೆ ಇದೆ. ಅದರ ಜಾಗ ಒತ್ತುವರಿ ಆಗಿರುವಂತೆ ಕಾಣುತ್ತಿದೆ. ಜಾಗವನ್ನು ಸರ್ವೆ ಮಾಡು ತ್ತೇವೆ’ ಎಂದರು.

ಮುಜರಾಯಿ ಇಲಾಖೆಯ ಆಯುಕ್ತ ಎಸ್.ಪಿ.ಷಡಕ್ಷರಿಸ್ವಾಮಿ, ‘ಹಳೆಯ ಯೋಜನೆಯ ಪ್ರಕಾರ ಕಲ್ಯಾಣಿ ಅಭಿವೃದ್ಧಿ ಮಾಡುವುದಿಲ್ಲ. ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಲ್ಯಾಣಿಗೆ ಸೇರಿದ ಜಾಗದಲ್ಲಿ ರಸ್ತೆ ನಿರ್ಮಿಸುವ ಇರಾದೆ ನಮಗಿಲ್ಲ. ಯೋಜನೆಯ ನಕ್ಷೆಯಲ್ಲಿ ರಸ್ತೆಯನ್ನು ತಪ್ಪಾಗಿ ಸೂಚಿಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಈ ಜಲಮೂಲದ ದಕ್ಷಿಣ ಬದಿಯ ಖಾಸಗಿ ನಿವೇಶನದಾರರಿಗೆ ಅನುಕೂಲ ಮಾಡಿಕೊಡಲು ಕಲ್ಯಾಣಿ ಪಕ್ಕ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ ಎಂದು  ಆರೋಪಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.