ADVERTISEMENT

ಮೃತರ ಕುಟುಂಬಕ್ಕೆ ನಿವೇಶನ- ಹೈಕೋರ್ಟ್‌ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ಬೆಂಗಳೂರು: ನಗರದ ಯಲಹಂಕದ ಬಳಿ 2008ರ ನವೆಂಬರ್ 14ರಂದು ಒಳಚರಂಡಿ ಸ್ವಚ್ಛಗೊಳಿಸಲು `ಮ್ಯಾನ್ ಹೋಲ್~ಗೆ ಇಳಿದು ಮೃತಪಟ್ಟ ಇಬ್ಬರು ಪೌರ ಕಾರ್ಮಿಕರು ಮತ್ತು ಅವರನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ ಆಟೊ ಚಾಲಕ ಈ ಮೂವರಿಗೂ ಸರ್ಕಾರದಿಂದ ನಿವೇಶನ ಮಂಜೂರು ಮಾಡಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿತು.

ಬೆಂಗಳೂರು ಒಳಚರಂಡಿ ಮಂಡಳಿಯ ಗುತ್ತಿಗೆ ಕಾರ್ಮಿಕರಾದ ನರಸಿಂಹಮೂರ್ತಿ, ಅಮರೇಶ್ ಹಾಗೂ ಕೋಲಾರ ಮೂಲದ ಆಟೊ ಚಾಲಕ ಶ್ರೀನಿವಾಸ್ ಅವರಿಗೆ ಅವರ ಊರುಗಳಲ್ಲಿಯೇ ನಿವೇಶನ ಮಂಜೂರು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ದುಡಿಯುವ  ಮಗನನ್ನು ಕಳೆದುಕೊಂಡು ತಮಗೆ ದಾರಿ ತೋರದಾಗಿದೆ ಎಂದು ತಿಳಿಸಿ ಶ್ರೀನಿವಾಸ ಅವರ ತಂದೆ ಕೃಷ್ಣಪ್ಪ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲರಾದ ಎಂ.ಸಿ.ನಾಗಶ್ರೀ ಈ ಮಾಹಿತಿ ನೀಡಿದ್ದಾರೆ. `ಇವರಿಗೆಲ್ಲ ಈಗಾಗಲೇ ಪರಿಹಾರದ ಹಣವನ್ನು ನೀಡಲಾಗಿದ್ದು, ಈಗ ನಿವೇಶನ ಮಂಜೂರು ಮಾಡಲು ಸರ್ಕಾರ ಒಪ್ಪಿಕೊಂಡಿದೆ~ ಎಂಬ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಮೋಹನ ಶಾಂತನಗೌಡರ್ ಅರ್ಜಿಯನ್ನು ಇತ್ಯರ್ಥಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.