ADVERTISEMENT

ಮೃತ ಯೋಧರ ಕುಟುಂಬಕ್ಕೆ ಸಮರ್ಪಣ ಸಂಸ್ಥೆಯ ನೆರವು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST

ಬೆಂಗಳೂರು: ದೇಶಕ್ಕಾಗಿ ಮಡಿದ ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ನಗರದ ಪಿಇಎಸ್ ತಾಂತ್ರಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳೇ ಸೇರಿ ಸ್ಥಾಪಿಸಿರುವ `ಸಮರ್ಪಣ~ ಸೇವಾ ಸಂಸ್ಥೆಯ ಮೂಲಕ 15 ಮೃತ ಯೋಧರ ಕುಟುಂಬಗಳಿಗೆ ನೆರವು ನೀಡಲು ಇದೇ 16 ರಂದು ಕಾಲೇಜಿನಲ್ಲಿ ಸಮಾರಂಭ ಹಮ್ಮಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಕಾಲೇಜಿನ ನಾಲ್ಕೈದು ಜನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಕಟ್ಟಿದ ಸಮರ್ಪಣ ಸಂಸ್ಥೆಯ ಮೂಲಕ ಈಗಾಗಲೇ ಕಷ್ಟದಲ್ಲಿರುವ ಕೆಲವು ಮೃತ ಯೋಧರ ಕುಟುಂಬಗಳಿಗೆ ನೆರವು ನೀಡಲಾಗಿದೆ. ಈ ವರ್ಷ 15 ಕುಟುಂಬಗಳನ್ನು ಗುರುತಿಸಿ ಸರ್ಕಾರದ ಸೌಲಭ್ಯ ತಲುಪಿಸುವುದರ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುವ ಉದ್ದೇಶ `ಸಮರ್ಪಣ~ ಸೇವಾ ಸಂಸ್ಥೆಯದ್ದು.

`ದೇಶಕ್ಕಾಗಿ ಮಡಿದ ವೀರ ಯೋಧರನ್ನ ಮರೆತು ಬಿಡೋ ಸಂದರ್ಭವೇ ಜಾಸ್ತಿ. ಸರ್ಕಾರಗಳೂ ಯೋಧರಿಗೆ ಸಿಗಬೇಕಾದ ಅನುಕೂಲಗಳನ್ನ ಸರಿಯಾಗಿ ನೀಡೋಲ್ಲ. ಇಂಥಾ ಸಂದರ್ಭದಲ್ಲಿ ಯೋಧರಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಸಮರ್ಪಣ ಸಂಸ್ಥೆಯನ್ನ ನಾವು ನಾಲ್ಕೈದು ಜನ ವಿದ್ಯಾರ್ಥಿಗಳೇ ಸೇರಿ ಕಟ್ಟಿದ್ದೇವೆ. ಈಗ ಬೆಂಗಳೂರಿನ ಕುಟುಂಬಗಳನ್ನಷ್ಟೇ ಸಹಾಯ ಮಾಡೋಕೆ ಗುರುತಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರೋ ಮೃತ ಯೋಧರ ಕುಟುಂಬಗಳನ್ನ ಗುರುತಿಸಿ ಸಹಾಯ ಮಾಡೋ ಉದ್ದೇಶ ಸಂಸ್ಥೆಯದ್ದು~ ಎಂದು `ಸಮರ್ಪಣ~ದ ಕಾರ್ಯ ಯೋಜನೆಗಳ ಬಗ್ಗೆ ಹಂಚಿಕೊಂಡವರು ತಂಡದ ನಾಯಕ ನಂದೀಶ್ ಹಸ್ಬಿ.

ADVERTISEMENT

`ಮೃತ ಯೋಧರ ಕುಟುಂಬಗಳಿಗೆ ಕೇವಲ ಹಣದ ನೆರವು ನೀಡಿ ಸುಮ್ಮನಾಗುವುದು ಸಂಸ್ಥೆಯ ಉದ್ದೇಶವಲ್ಲ. ಕುಟುಂಬಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಾಗೂ ಕುಟುಂಬಗಳನ್ನು ಸ್ವಾವಲಂಬಿಯಾಗಿಸುವ ಗುರಿ ಇದೆ~ ಎಂದರು.

ಸಮರ್ಪಣ ಸಂಸ್ಥೆಯ ಮೂಲಕ ರೂಪಿಸಿರೋ ಯೋಜನೆ ಉತ್ತಮವಾಗಿದೆ. ಮೃತ ಯೋಧರ ಕುಟುಂಬಗಳಿಗೆ ಸಹಾಯ ಮಾಡೋಕೆ ಪಿಇಎಸ್ ಸಂಸ್ಥೆ ಯಿಂದಲೂ ಬೆಂಬಲ ಇದೆ.  ಕಾಲೇಜಿನ `ಶಿಕ್ಷಾಕಲ್ಪ~ ಅಧ್ಯಾಪಕರ ಸಹಾಯ ಘಟಕದಿಂದಲೂ ಈ ಕಾರ್ಯಕ್ಕೆ ನೆರವು ನೀಡಲಾಗುತ್ತಿದೆ.

`ಮೃತ ಯೋಧರ ಕುಟುಂಬಗಳಲ್ಲಿ ಅರ್ಹತೆ ಇರೋ ವಿದ್ಯಾರ್ಥಿಗಳಿಗೆ ನಮ್ಮ ವಿದ್ಯಾಸಂಸ್ಥೆಗಳಲ್ಲೇ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಶೈಕ್ಷಣಿಕ ನೆರವಿಗೆ ಅವಕಾಶ ಮಾಡಿಕೊಡಲಾಗುತ್ತೆ~ ಎಂದು ಪಿಇಎಸ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಆರ್.ದೊರೆಸ್ವಾಮಿ ಹೇಳಿದದ್ದಾರೆ.

ಸಾಕ್ಷ್ಯಚಿತ್ರ: ರಕ್ಷಣಾ ಇಲಾಖೆಯ ಸಹಾಯದಿಂದ ವಿದ್ಯಾರ್ಥಿಗಳು ಮೃತ ಯೋಧರ ಕುಟುಂಬಗಳನ್ನು ಗುರುತಿಸಿದ್ದಾರೆ. ವಿದ್ಯಾರ್ಥಿಗಳು ಮೃತ ಯೋಧರ ಕುಟುಂಬಗಳ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನೂ `ಸಮರ್ಪಣ~ದ ಮೂಲಕ ನಿರ್ಮಿಸಿದ್ದಾರೆ. ಈ ವರೆಗೆ ಸುಮಾರು ಒಂದು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿರುವ ಸಂಸ್ಥೆಯ ವಿದ್ಯಾರ್ಥಿಗಳು ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದ್ದಾರೆ.

ಇದೇ 16 ರಂದು ನಗರದ ಬನಶಂಕರಿ ಮೂರನೇ ಹಂತದ ಪಿಇಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಮೃತ ಯೋಧರ ಕುಟುಂಬ ಸದಸ್ಯರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.