ADVERTISEMENT

ಮೆಟ್ರೊದಲ್ಲಿ ಹಿಂದಿ ಹೇರಿಕೆ ವಿರುದ್ಧ ಆಂದೋಲನ: ಬೆಂಬಲ ಕೋರಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2017, 19:16 IST
Last Updated 9 ಜುಲೈ 2017, 19:16 IST
ಮೆಟ್ರೊದಲ್ಲಿ ಹಿಂದಿ ಹೇರಿಕೆ ವಿರುದ್ಧ ಆಂದೋಲನ: ಬೆಂಬಲ ಕೋರಿ  ಪತ್ರ
ಮೆಟ್ರೊದಲ್ಲಿ ಹಿಂದಿ ಹೇರಿಕೆ ವಿರುದ್ಧ ಆಂದೋಲನ: ಬೆಂಬಲ ಕೋರಿ ಪತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಹೇರಿಕೆ ಮಾಡಿದ್ದನ್ನು ವಿರೋಧಿಸಿ ನಡೆಸುತ್ತಿರುವ ಆಂದೋಲನಕ್ಕೆ ಬೆಂಬಲ ಕೋರಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಹಲವು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ  ಅವರು,  ‘ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಇ.ಕೆ.ಪಳನಿಸ್ವಾಮಿ, ಕೇರಳದ ಪಿನರಾಯ್‌ ವಿಜಯನ್‌, ಒರಿಸ್ಸಾದ ನವೀನ್‌ ಪಟ್ನಾಯಕ್‌, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ತೆಲಂಗಾಣದ ಚಂದ್ರಶೇಖರ್‌ ರಾವ್, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಶಿವಸೇನೆ ಅಧ್ಯಕ್ಷ ಉದ್ದವ್‌ ಠಾಕ್ರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದೇನೆ’ ಎಂದು  ತಿಳಿಸಿದ್ದಾರೆ.

‘ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದಾದ ಭಾರತವು ಬಹುಸಂಸ್ಕೃತಿ, ಬಹು ಪರಂಪರೆ ಹೊಂದಿದೆ. ಆದರೆ, ಕೇಂದ್ರ ಸರ್ಕಾರದ ಭಾಷಾ ನೀತಿಯಿಂದ ಹಿಂದಿಯೇತರ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ನಿರ್ನಾಮ ಮಾಡುವ ಸಂಚು ನಡೆದಿದೆ’.

ADVERTISEMENT

‘ದೇಶದ ಹಲವು ಪ್ರಾದೇಶಿಕ ಭಾಷೆಗಳ ಪೈಕಿ ಹಿಂದಿಯು ಒಂದು. ಅದನ್ನು ಹೆಚ್ಚು ಜನ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಇತರೆಪ್ರಾದೇಶಿಕ ಭಾಷಿಕರ ಮೇಲೆ ಹೇರುವುದು ಸರಿಯಲ್ಲ. ಇಂಥ ನೀತಿಯಿಂದ ಪ್ರಾದೇಶಿಕ ಭಾಷೆಗಳ ಮಧ್ಯೆಯೇ ಒಡಕು ಮೂಡಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ದೇಶದಲ್ಲಿ ಭಾಷಾ ಸಮಾನತೆ ಜಾರಿಯಾಗಬೇಕು. ಸಂವಿಧಾನದ ಮಾನ್ಯತೆ ಪಡೆದ 22 ಭಾಷೆಗಳನ್ನು ಭಾರತ ಒಕ್ಕೂಟ ಸರ್ಕಾರಗಳ ಅಧಿಕೃತ ಭಾಷೆಯನ್ನಾಗಿ ಮಾಡಬೇಕು. ಮೆಟ್ರೊದಂಥ ಸಾರಿಗೆ ವ್ಯವಸ್ಥೆಯಲ್ಲಿ ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು   ಎಂದು ಒತ್ತಾಯಿಸಿ, ಭಾಷಾ ಸಮಾನತೆ ನೆಲೆಗೊಳಿಸುವ ಉದ್ದೇಶದಿಂದ ಆಂದೋಲನ ಆರಂಭಿಸಿದ್ದೇವೆ. ಇದಕ್ಕೆ ಬೆಂಬಲ ನೀಡಬೇಕು’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.