ADVERTISEMENT

ಮೆಟ್ರೊ ಉದ್ಘಾಟನೆ: ಸಂಚಾರ ಬದಲಾವಣೆ, ನಿಲುಗಡೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರದ ಮಾಣೆಕ್ ಷಾ ಪೆರೇಡ್ ಮೈದಾನಲ್ಲಿ ಮೆಟ್ರೊ ರೈಲು ಉದ್ಘಾಟನಾ ಸಮಾರಂಭ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ (ಅ.20) ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸುತ್ತಮುತ್ತಲ ರಸ್ತೆಗಳ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕಾವೇರಿ ಎಂಪೋರಿಯಂ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಮತ್ತು ರಸ್ತೆಯ ಎರಡೂ ಕಡೆ ವಾಹನ ನಿಲುಗಡೆಗೆ ಅವಕಾಶವಿಲ್ಲ.

ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಓಪೇರಾ ಜಂಕ್ಷನ್‌ವರೆಗೆ, ಕಾಮರಾಜ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಮತ್ತು ಚರ್ಚ್‌ಸ್ಟ್ರೀಟ್‌ನ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

ಮೆಯೋಹಾಲ್‌ನಿಂದ ಎಂ.ಜಿ.ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಕಾವೇರಿ ಎಂಪೋರಿಯಂ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಬ್ರಿಗೇಡ್ ರಸ್ತೆಯಲ್ಲಿ ಸಾಗಿ ನಂತರ ಚರ್ಚಸ್ಟ್ರೀಟ್‌ಗೆ ಬಲ ತಿರುವು ಪಡೆದು ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ ಮೂಲಕ ಹೋಗಬೇಕು.

ವಾಹನ ನಿಲುಗಡೆ: ಕೇಂದ್ರ ಸಚಿವರು, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ವಾಹನ ನಿಲುಗಡೆಗೆ ಮಾಣೆಕ್ ಷಾ ಪೆರೇಡ್ ಮೈದಾನದ ಸಮಾರಂಭದ ವೇದಿಕೆ ಹಿಂಭಾಗದಲ್ಲಿ ಅವಕಾಶ ನೀಡಲಾಗಿದೆ. ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳ ವಾಹನಗಳನ್ನು ಮೈದಾನದ ಉತ್ತರ ಭಾಗದಲ್ಲಿ (ಕಬ್ಬನ್ ರಸ್ತೆ ಕಡೆಗೆ) ನಿಲ್ಲಿಸಬೇಕು.

ಸಾರ್ವಜನಿಕರ ವಾಹನಗಳನ್ನು ಮೈದಾನದ ದಕ್ಷಿಣ ಭಾಗದಲ್ಲಿ (ಎಂ.ಜಿ.ರಸ್ತೆ ಕಡೆಗೆ), ಪೊಲೀಸ್ ಅಧಿಕಾರಿಗಳು ಮತ್ತು ಮೆಟ್ರೊ ಅಧಿಕಾರಿಗಳ ವಾಹನಗಳನ್ನು ಬಿಆರ್‌ವಿ ಮೈದಾನದಲ್ಲಿ ನಿಲ್ಲಿಸಬೇಕು. ಕಾಮರಾಜ ರಸ್ತೆಯಲ್ಲಿ ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಡಿಕೆನ್ಸನ್ ರಸ್ತೆ ಜಂಕ್ಷನ್‌ವರೆಗೆ ವಾಹನ ನಿಲುಗಡೆಗೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.