ADVERTISEMENT

ಮೆಟ್ರೊ: ‘ಕ್ಷಿಪ್ರ’ ಕಾರ್ಯಪಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:53 IST
Last Updated 15 ಅಕ್ಟೋಬರ್ 2017, 19:53 IST

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು ಸಿಬ್ಬಂದಿಯ ಮುಷ್ಕರ ಹತ್ತಿಕ್ಕಲು ಅಗತ್ಯ ಸೇವೆ ನಿರ್ವಹಣಾ ಕಾಯ್ದೆಯನ್ನು(ಎಸ್ಮಾ) ಜಾರಿಗೊಳಿಸಿದ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದ ಬೆನ್ನಲ್ಲೇ ನಿಗಮವು ಕ್ಷಿಪ್ರ ಕಾರ್ಯಪಡೆಯೊಂದನ್ನು ಆರಂಭಿಸಿದೆ.

ಸಿಬ್ಬಂದಿಯ ಮುಷ್ಕರದಂತಹ ತುರ್ತು ಸಂದರ್ಭದಲ್ಲಿ ಮೆಟ್ರೊ ಕಾರ್ಯಾಚರಣೆಗೆ ಧಕ್ಕೆ ಉಂಟಾಗದಂತೆ ತಡೆಯುವ ಸಲುವಾಗಿ ನಿಗಮಎಂಜಿನಿಯರ್‌ಗಳ ತಂಡ ಸಜ್ಜುಗೊಳಿಸಿದೆ.

ಜುಲೈ ತಿಂಗಳಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಘರ್ಷಣೆ ನಡೆದಿತ್ತು. ಸಂಸ್ಥೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾದರೂ ನಿಗಮದ ಅಧಿಕಾರಿಗಳು ರಕ್ಷಣೆಗೆ ಧಾವಿಸಿಲ್ಲ ಎಂದು ಆರೋಪಿಸಿ ಕಾರ್ಯಾಚರಣೆ ವಿಭಾಗದ ಸಿಬ್ಬಂದಿ ದಿಢೀರ್‌ ಮುಷ್ಕರ ನಡೆಸಿದ್ದರು. ಇದರಿಂದಾಗಿ ಮೆಟ್ರೊ ಸೇವೆ ಸ್ಥಗಿತಗೊಂಡಿತ್ತು. ಆಗ ರಾಜ್ಯ ಸರ್ಕಾರ ಸಿಬ್ಬಂದಿ ವಿರುದ್ಧ ಎಸ್ಮಾ ಜಾರಿಗೊಳಿಸಿತ್ತು.

ADVERTISEMENT

‘ತುರ್ತು ಸಂದರ್ಭವನ್ನು ನಿಭಾಯಿಸಲು ನಿಗಮ ಸೆ‍ಪ್ಟೆಂಬರ್‌ನಿಂದಲೇ ಸಿಬ್ಬಂದಿಗೆ ವಿಶೇಷ ತರಬೇತಿ ನೀಡುತ್ತಿದೆ. ಎಸ್ಮಾ ಜಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ ಬಳಿಕ, ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಜಿನಿಯರ್‌ಗಳು ಸಹಿತ 39 ಸಿಬ್ಬಂದಿಯನ್ನು ಗುರುತಿಸಲಾಗಿದೆ. ಅವರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ ಹೆಚ್ಚುವರಿ ತರಬೇತಿ ನೀಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಸಿಬ್ಬಂದಿ ದೈನಂದಿನ ಕರ್ತವ್ಯ ನಿರ್ವಹಿಸಿದ ಬಳಿಕ ತರಬೇತಿಗೆ ಹಾಜರಾಗಬೇಕು. ಪೀಣ್ಯ ಹಾಗೂ ಬೈಯಪ್ಪನಹಳ್ಳಿ ಡಿಪೊಗಳಲ್ಲಿ ಪರೀಕ್ಷಾರ್ಥ ನಿರ್ಮಿಸಿರುವ ಹಳಿಗಳಲ್ಲಿ ನಿತ್ಯವೂ ಮೂರರಿಂದ ನಾಲ್ಕು ಗಂಟೆ ವಿಶೇಷ ತರಬೇತಿ ನೀಡಲಾಗುತ್ತಿದೆ’  ಎಂದು ಅಧಿಕಾರಿ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್ ಖರೋಲ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.