ADVERTISEMENT

ಮೆಟ್ರೊ ನಿಲ್ದಾಣ: ಕಾಫಿ ಮಳಿಗೆ ಟೆಂಡರ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

ಬೆಂಗಳೂರು: ನಗರದ ಮಹಾತ್ಮ ಗಾಂಧಿ (ಎಂ.ಜಿ. ರಸ್ತೆ) ಹಾಗೂ ಬೈಯಪ್ಪನಹಳ್ಳಿಯಲ್ಲಿರುವ `ನಮ್ಮ ಮೆಟ್ರೊ~ದ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಪ್ ಕಾಫಿಗಾಗಿ ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ!

ನಗರದ ಪ್ರಮುಖ ಎರಡೂ ನಿಲ್ದಾಣಗಳಲ್ಲಿ ಕಾಫಿ  ಅಂಗಡಿಗಳಿಗಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕರೆದಿರುವ ಟೆಂಡರ್‌ಗೆ ಉತ್ತಮ ಪ್ರತಿಕ್ರಿಯೆ ಬಾರದೇ ಇರುವುದು ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ನಿಗಮವು ಟೆಂಡರ್‌ನ ಅವಧಿಯನ್ನು ಈ ತಿಂಗಳ 16ರವರೆಗೆ ವಿಸ್ತರಿಸಲಾಗಿದೆ.

ಏಪ್ರಿಲ್ ಮೊದಲ ವಾರದಲ್ಲಿ ಕಾಫಿ  ಅಂಗಡಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಆಗ ಬಿಡ್ ಮಾಡಲು ಮೇ 4ರಂದು ಕೊನೆಯ ದಿನಾಂಕ ಎಂದು ತಿಳಿಸಲಾಗಿತ್ತು. ಆದರೆ ಟೆಂಡರ್ ವಹಿಸಿಕೊಳ್ಳಲು ಆಸಕ್ತಿ ವಹಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಎಂ.ಜಿ. ರಸ್ತೆಯ ನಿಲ್ದಾಣದಲ್ಲಿ ಎರಡು ಹಾಗೂ ಬೈಯಪ್ಪನಹಳ್ಳಿಯಲ್ಲಿ ಎರಡು ಅಂಗಡಿಗಳಿಗೆ ಟೆಂಡರ್ ಕರೆಯಲಾಗಿತ್ತು. ಈ ಅಂಗಡಿಗಳ ಮಾಲೀಕತ್ವದ ಅವಧಿ ಎರಡು ವರ್ಷ. ಒಂದೊಂದು ಅಂಗಡಿಗಳ ವಿಸ್ತೀರ್ಣ 45ರಿಂದ 70 ಚದರ ಮೀಟರ್. ಈ ಅಂಗಡಿಗಳಲ್ಲಿ ಬಿಸಿ ಹಾಗೂ ತಣ್ಣನೆಯ ಕಾಫಿ, ಚಹಾ, ಬೇಕರಿ ಆಹಾರ ಸಾಮಗ್ರಿಗಳು ಹಾಗೂ ಬಾಟಲಿ ನೀರುಗಳನ್ನು ಮಾರಬಹುದು ಎಂದು ತಿಳಿಸಲಾಗಿತ್ತು.

`ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಿಡ್‌ದಾರರ ಕೆಲವು ಸಂಶಯಗಳಿಗೆ ಉತ್ತರಿಸಲಾಗಿದೆ. ಸಂಶಯಗಳು ಮತ್ತು ಉತ್ತರಗಳನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನೋಡಬಹುದು. ಮುಂದಿನ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಇದೆ~ ಎಂದು ಬಿಎಂಆರ್‌ಸಿಲ್ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯು.ಎ. ವಸಂತ ರಾವ್ `ಪ್ರಜಾವಾಣಿ~ಗೆ ಗುರುವಾರ ತಿಳಿಸಿದರು.

ಅಂಗಡಿಗಳಿಗೆ ಸಂಸ್ಥೆ ನಿಗದಿ ಮಾಡಿರುವ ಬಾಡಿಗೆ ದರವೇ ಹೆಚ್ಚಿನವರು ನಿರಾಸಕ್ತಿ ತೋರಲು ಕಾರಣ. ಈ ಬಾಡಿಗೆ ದರ ದುಬಾರಿ ಎಂಬುದು ಅವರ ಅಭಿಮತ ಎಂದು ಬಿಎಂಆರ್‌ಸಿಲ್‌ಮೂಲಗಳು ತಿಳಿಸಿವೆ. ನಗರದ ಕೆಲವು ಪ್ರಸಿದ್ಧ ಕಾಫಿ  ಅಂಗಡಿಗಳ ಮಾಲೀಕರು ಪರವಾನಗಿ ಪಡೆಯಲು ಆಸಕ್ತರಾಗಿದ್ದಾರೆ. ಆದರೆ, ದುಬಾರಿ ಬಾಡಿಗೆ ನೀಡಿ ಮೆಟ್ರೊ ಕಾರಿಡಾರ್‌ನ ಕೆಲಸ ಪೂರ್ಣಗೊಳ್ಳುವ ಹೊತ್ತಿಗೆ ಹೆಚ್ಚಿನ ಲಾಭ ಪಡೆಯುವುದು ಕಷ್ಟಸಾಧ್ಯ ಎಂಬ ಭಾವನೆ ಅವರಲ್ಲಿದೆ ಎಂಬುದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ.

ಎಂ.ಜಿ. ರಸ್ತೆಯ ನಿಲ್ದಾಣದ ಒಂದೊಂದು ಅಂಗಡಿಗೆ ತಿಂಗಳ ಬಾಡಿಗೆ ರೂ 1 ಲಕ್ಷ ಹಾಗೂ ಬೈಯಪ್ಪನಹಳ್ಳಿಯ ಅಂಗಡಿಗೆ ರೂ 80 ಸಾವಿರ ಬಾಡಿಗೆ ಎಂದು ಸಂಸ್ಥೆ ನಿಗದಿಪಡಿಸಿದೆ. ಮುಂಗಡ ಮೊತ್ತವಾಗಿ ಎಂ.ಜಿ. ರಸ್ತೆಯ ನಿಲ್ದಾಣದ ಪ್ರತಿ ಅಂಗಡಿಗಳಿಗೆ ರೂ 10 ಲಕ್ಷ, ಬೈಯಪ್ಪನಹಳ್ಳಿಯ ಅಂಗಡಿಗಳಿಗೆ ರೂ 8 ಲಕ್ಷ ಮತ್ತು ರೂ 6 ಲಕ್ಷ ಎಂಬುದಾಗಿ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಮರುಪಾವತಿಸುವುದಿಲ್ಲ ಎಂದು ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.