ADVERTISEMENT

ಮೆಟ್ರೊ- ನ್ಯೂನತೆ ಸರಿಪಡಿಸಿದ ಬಳಿಕವಷ್ಟೇ ಶಿಫಾರಸು: ಆಯುಕ್ತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 18:50 IST
Last Updated 13 ಸೆಪ್ಟೆಂಬರ್ 2011, 18:50 IST

ಬೆಂಗಳೂರು: `ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ನಮ್ಮ ಮೆಟ್ರೊದ ರೀಚ್-1ರ ಮಾರ್ಗದಲ್ಲಿ ನಾವು ಪತ್ತೆ ಹಚ್ಚಿ, ಪಟ್ಟಿ ಮಾಡಿರುವ ನ್ಯೂನತೆಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಸರಿಪಡಿಸಬೇಕಿದೆ. ನ್ಯೂನತೆಗಳನ್ನು ಸರಿಪಡಿಸಿಕೊಂಡ ಬಗ್ಗೆ ನಿಗಮವು ವರದಿ ಸಲ್ಲಿಸಿದ ಬಳಿಕವಷ್ಟೇ ನಾವು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಶಿಫಾರಸು ಮಾಡುವುದು~-

ಇದು ರೀಚ್- 1ರ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಿರುವ ರೈಲ್ವೆ ಸುರಕ್ಷತಾ ಆಯುಕ್ತ ದೀಪಕ್‌ಕುಮಾರ್ ಸಿಂಗ್ ಅವರ ಸ್ಪಷ್ಟನುಡಿ.

ಸಿಕಂದರಾಬಾದ್‌ನಲ್ಲಿರುವ ಸಿಂಗ್ ಅವರು `ಪ್ರಜಾವಾಣಿ~ ಜತೆ ಮಾತನಾಡಿ, `ಮಾರ್ಗದಲ್ಲಿ ಕಂಡು ಬಂದಿರುವ ಲೋಪದೋಷಗಳ ಪಟ್ಟಿಯನ್ನು ನಿಗಮಕ್ಕೆ ಕೊಟ್ಟಿದ್ದೇವೆ~ ಎಂದರು.

ಆದರೆ, ನ್ಯೂನತೆಗಳ ಬಗ್ಗೆ ಮಾಹಿತಿ ನೀಡಲು ಸಿಂಗ್ ನಿರಾಕರಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ, `ಆಯುಕ್ತರು 28 ಅಂಶಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ ಮಾರ್ಗದಲ್ಲಿ ಯಾವುದನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ~ ಎಂದರು.

`ಆಯುಕ್ತರು ಪಟ್ಟಿ ಮಾಡಿರುವ ಅಂಶಗಳೆಲ್ಲವೂ ದಾಖಲಾತಿ, ಸಿಬ್ಬಂದಿಗೆ ಸೂಚನೆಗಳು ಮತ್ತು ಸಾರ್ವಜನಿಕ ಪ್ರಕಟಣೆಗಳಿಗೆ ಸಂಬಂಧಿಸಿದವುಗಳಾಗಿವೆ. ಎಲ್ಲ ಸೂಚನೆಗಳನ್ನು ಪಾಲಿಸುತ್ತೇವೆ~ ಎಂದು ಅವರು ತಿಳಿಸಿದರು.

ನಿಗಮದ ವಕ್ತಾರ ಬಿ.ಎಲ್.ವೈ. ಚವಾಣ್, `ವಿನ್ಯಾಸ ಅಥವಾ ತಾಂತ್ರಿಕ ದೃಷ್ಟಿಯಲ್ಲಿ ಅಂತಹ ಲೋಪದೋಷಗಳೇನೂ ಇಲ್ಲ. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಬಂದಿದೆ. ಈ ಸಂಬಂಧ ಹೆಚ್ಚುವರಿ ದಾಖಲೆಗಳನ್ನೂ ನಾವು ಸಲ್ಲಿಸುತ್ತೇವೆ~ ಎಂದರು.

`ನಿಗಮವು ವರದಿ ಸಲ್ಲಿಸಿದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರಿಗೆ ತಮ್ಮ ಶಿಫಾರಸು ವರದಿ ಸಲ್ಲಿಸಲಿದ್ದಾರೆ. ಆನಂತರ ರೈಲ್ವೆ ಮಂಡಳಿಯು ಮೆಟ್ರೊದ ರೈಲು ಸಂಚಾರಕ್ಕೆ ಸುರಕ್ಷತಾ ಪ್ರಮಾಣಪತ್ರ ಮತ್ತು ನಿರಾಕ್ಷೇಪಣಾ ಪತ್ರಗಳನ್ನು ನೀಡಲಿದೆ~ ಎಂದು ವಿವರಿಸಿದರು.

ಇತ್ತೀಚೆಗೆ `ನಮ್ಮ ಮೆಟ್ರೊ~ ಮಾರ್ಗವನ್ನು ಪರಿಶೀಲಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಈ ತಿಂಗಳ 25ರೊಳಗೆ ಎಲ್ಲಾ ರೀತಿಯ ಅನುಮತಿ ಪಡೆದು ಮೆಟ್ರೊ ರೈಲಿನ ಸಾರ್ವಜನಿಕ ಸಂಚಾರವನ್ನು ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ ಸುರಕ್ಷತಾ ಪ್ರಮಾಣ ಪತ್ರ ಸಿಗಲು ಇನ್ನು ಎಷ್ಟು ದಿನ ಕಾಯಬೇಕಾಗುತ್ತದೆಂಬ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅದನ್ನು ಪಡೆದ ನಂತರವಷ್ಟೇ ರೈಲಿನ ಸಾರ್ವಜನಿಕ ಸಂಚಾರದ ದಿನಾಂಕ ನಿಗದಿಯಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.