ADVERTISEMENT

ಮೊಕದ್ದಮೆ ಎದುರಿಸುತ್ತಿರುವ 14 ಸಂಸದರು, 34 ಶಾಸಕರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:00 IST
Last Updated 20 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ಕೋಮು ಸಂಘರ್ಷಕ್ಕೆ ಕುಮ್ಮಕ್ಕು,  ಪೂಜಾ ಸ್ಥಳಗಳಿಗೆ ಹಾನಿ ಹಾಗೂ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದಡಿ ರಾಜ್ಯದ ಒಬ್ಬ ಸಚಿವ, ಒಬ್ಬ ಸಂಸದ ಮತ್ತು ಇಬ್ಬರು ಶಾಸಕರು ಸೇರಿದಂತೆ ದೇಶದ ವಿವಿಧೆಡೆಯ 14 ಸಂಸದರು ಮತ್ತು 34 ಶಾಸಕರು  ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದಾರೆ.

ವಕ್ಫ್‌ ಸಚಿವ ಖಮರುಲ್‌ ಇಸ್ಲಾಂ ಅವರು ಧಾರ್ಮಿಕ ಸ್ಥಳಕ್ಕೆ ಧಕ್ಕೆ ತಂದ ಆಪಾದನೆ ಎದುರಿಸುತ್ತಿದ್ದಾರೆ. ಬಿಜೆಪಿ ಸಂಸದ ಸುರೇಶ್‌ ಅಂಗಡಿ ಮೇಲೆ, ಧರ್ಮದ ಆಧಾರದಲ್ಲಿ ವಿವಿಧ ಕೋಮುಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪವಿದೆ. ಬಿಜೆಪಿ ಶಾಸಕರಾದ ಸಂಭಾಜಿ ಪಾಟೀಲ ಮತ್ತು ಸಂಜಯ್‌ ಬಿ.ಪಾಟೀಲ್‌ ವಿರುದ್ಧವೂ ಇದೇ ಕ್ರಿಮಿನಲ್‌ ಮೊಕದ್ದಮೆಗಳಿವೆ.

ದೇಶದ ಎಲ್ಲಾ ಸಂಸದರು ಮತ್ತು ಶಾಸಕರು ಚುನಾವಣೆಗೆ ಸ್ಪರ್ಧಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಅಧ್ಯಯನ ಮಾಡಿರುವ ‘ಅಸೋಸಿಯೇಷನ್‌ ಫಾರ್‌ ಡೆಮಾ ಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ಸಂಸ್ಥೆ, ಈ ಕುರಿತ ವಿವರಗಳುಳ್ಳ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಸಂಸದರಾದ ವರುಣ್‌ ಗಾಂಧಿ, ಅಸಾದುದ್ದೀನ್‌ ಒವೈಸಿ, ತಿರು ಮಲವನ್‌ ತೋಳ್‌ ವಿರುದ್ಧ ಧರ್ಮದ ಆಧಾರದಲ್ಲಿ ವಿವಿಧ ಕೋಮುಗಳ ನಡುವೆ ಸಂಘರ್ಷಕ್ಕೆ ಪ್ರಚೋದನೆ ನೀಡಿದ ಮತ್ತು ಉದ್ದೇಶಪೂರ್ವಕ­ವಾಗಿಯೇ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದ ಅಡಿ  ಮೊಕದ್ದಮೆಗಳಿವೆ.

ಇತರೆ ಆರು ಸಂಸದರ ವಿರುದ್ಧ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಮಾತ್ರ ಮೊಕದ್ದಮೆ ಇದೆ. ಬಿಜೆಪಿ ಸಂಸದ ಆದಿತ್ಯನಾಥ್‌, ಶಿವಸೇನೆಯ ಸುಭಾಷ್‌ ಬಾಪುರಾವ್‌ ವಾಂಖೆಡೆ ಮತ್ತು ಸಮಾಜವಾದಿ ಪಕ್ಷದ ಬ್ರಿಜ್‌ಭೂಷಣ್‌ ಸರಣ್‌ಸಿಂಗ್‌ ವಿರುದ್ಧ ಉದ್ದೇಶ­ಪೂರ್ವಕ­ವಾಗಿಯೇ ಧಾರ್ಮಿಕ ಸ್ಥಳಗಳಿಗೆ ಧಕ್ಕೆ ಮಾಡಿದ ಆಪಾದನೆ ಇದೆ ಎಂದು ಎಡಿಆರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.