ADVERTISEMENT

ಮೊಹರಂ ಮೆರವಣಿಗೆ: ಶಿಯಾ ಮುಸ್ಲಿಮರಿಂದ ದೇಹ ದಂಡನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 20:02 IST
Last Updated 1 ಅಕ್ಟೋಬರ್ 2017, 20:02 IST
ಮೊಹರಂ ಅಂಗವಾಗಿ ಜಾನ್ಸನ್ ಮಾರುಕಟ್ಟೆ ಬಳಿಯ ಹೊಸೂರು ರಸ್ತೆಯಲ್ಲಿ ಭಾನುವಾರ ಶಿಯಾ ಮುಸ್ಲಿಮರು ಶೋಕಾಚರಣೆ ನಡೆಸಿದರು –ಪ್ರಜಾವಾಣಿ ಚಿತ್ರ
ಮೊಹರಂ ಅಂಗವಾಗಿ ಜಾನ್ಸನ್ ಮಾರುಕಟ್ಟೆ ಬಳಿಯ ಹೊಸೂರು ರಸ್ತೆಯಲ್ಲಿ ಭಾನುವಾರ ಶಿಯಾ ಮುಸ್ಲಿಮರು ಶೋಕಾಚರಣೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೊಹರಂ ಪ್ರಯುಕ್ತ ನಗರದ ಜಾನ್ಸನ್‌ ಮಾರುಕಟ್ಟೆ ಬಳಿ ಭಾನುವಾರ ಶಿಯಾ ಮುಸ್ಲಿಮರು ಮೆರವಣಿಗೆ ನಡೆಸಿದರು. ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ಕಪ್ಪು ಬಟ್ಟೆ ಧರಿಸಿದ ಸಾವಿರಾರು ಮಂದಿ ಭಾಗವಹಿಸಿದರು. ವಿಶೇಷಾಲಂಕೃತ ಸ್ತಬ್ಧಚಿತ್ರಗಳು ಸಾಗಿಬಂದವು.

ಸ್ತಬ್ಧಚಿತ್ರಗಳಿಗೆ ಹಾಗೂ ಆರು ಕುದುರೆಗಳಿಗೆ ಕಟ್ಟಿದ್ದ ಹಸಿರು ಬಣ್ಣದ ಬಟ್ಟೆಗಳಿಗೆ ಪುಟ್ಟ ಪುಟ್ಟ ಮಕ್ಕಳನ್ನು ತಾಗಿಸಿ ‘ದೇವರೇ ಮಕ್ಕಳಿಗೆ ಒಳಿತು ಮಾಡು’ ಎಂದು ಕೆಲ ಪೋಷಕರು ಬೇಡಿಕೊಂಡರು. ಬಟ್ಟೆಯನ್ನು ಕಣ್ಣಿಗೆ ಹೊತ್ತಿದ ಮಹಿಳೆಯೊಬ್ಬರು ಭಾವುಕರಾದರು.

ದೇಹದಂಡನೆ: ಸುಮಾರು ನಾಲ್ಕು ತಾಸು ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ‘ಆಲಿ ದೂಲಾ’ ಎಂದು ಕೂಗುತ್ತಾ ದಾರಕ್ಕೆ ಕಟ್ಟಿದ್ದ ಬ್ಲೇಡ್‌ಗಳ ಗೊಂಚಲನ್ನು ಜನರು ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿದರು.

ADVERTISEMENT

ಎದೆ ಭಾಗಕ್ಕೆ ಬ್ಲೇಡ್‌ನಿಂದ ಬಡಿದುಕೊಂಡಿದ್ದರಿಂದ ಹೆಚ್ಚು ರಕ್ತಸ್ರಾವವಾಗಿ ವ್ಯಕ್ತಿಯೊಬ್ಬರು ಕುಸಿದುಬಿದ್ದರು. ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಮೊಮ್ಮಗ ಇಮಾಮಿ ಹುಸೇನ್ ಧರ್ಮದ ಉಳಿವಿಗಾಗಿ ಹಾಗೂ ನ್ಯಾಯಕ್ಕಾಗಿ ಹೋರಾಡಿ ಯುದ್ಧದಲ್ಲಿ ಮರಣ ಹೊಂದುತ್ತಾರೆ. ಅವರ ಸಾವಿನ ಸ್ಮರಣಾರ್ಥ ಈ ಶೋಕಾಚರಣೆ ಆಚರಿಸುತ್ತಿದ್ದೇವೆ. ಇದಕ್ಕಾಗಿ ಬೆಳಿಗ್ಗೆಯಿಂದ ಉಪಸವಿದ್ದೇವೆ. ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡುಬಂದಿದೆ’ ಎಂದು ಅಂಜುಮಾನ್ ಇ ಇಮಾಮಿ ಸಂಘಟನೆಯ ಉಪಾಧ್ಯಕ್ಷ ಮಿರ್ಜಾ ತಿಳಿಸಿದರು.

ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ನಾಲ್ಕು ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಮೆರವಣಿಗೆಗೆ ಮೊದಲು ಜಾನ್ಸನ್ ಮಾರುಕಟ್ಟೆ ಬಳಿಯ ಅಲಿ ಅಸ್ಕರ್ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಸಂಚಾರಕ್ಕೆ ಅಡ್ಡಿ: ಮೆರವಣಿಗೆ ಪ್ರಯುಕ್ತ ಹೊಸೂರು ರಸ್ತೆಯಲ್ಲಿ ಸುಮಾರು 2 ಕಿಲೋ ಮೀಟರ್‌ಗಳಷ್ಟು ದೂರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕಾರ್ಪೊರೇಷನ್ ವೃತ್ತ ಬಳಿ ಸುಮಾರು ನಾಲ್ಕು ಗಂಟೆ ಸಂಚಾರ ದಟ್ಟಣೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.