ADVERTISEMENT

ಯಡಿಯೂರು ದೇವಾಲಯ ಕಟ್ಟಡ ಮರುನಿರ್ಮಾಣ ವಿವಾದ....

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 19:30 IST
Last Updated 9 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ತುಮಕೂರಿನ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಕಟ್ಟಡದ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶಪಾಲನೆ ಮಾಡದ ಪ್ರಾಚ್ಯವಸ್ತು ಸರ್ವೇಕ್ಷಣಾ ನಿರ್ದೇಶನಾಲಯ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಒಳಗಾಯಿತು.

ಮರು ನಿರ್ಮಾಣದ ಕುರಿತ ಸಾಧ್ಯಾಸಾಧ್ಯತೆಗಳ ಪರಿಶೀಲನೆ ನಡೆಸುವ ಸಂಬಂಧ ಸಮೀಕ್ಷೆ ನಡೆಸುವಂತೆ ನಿರ್ದೇಶನಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಹಿಂದೆ ಹಲವು ಬಾರಿ ಆದೇಶಿಸಿತ್ತು.

ಶುಕ್ರವಾರ ಕೋರ್ಟ್‌ನಲ್ಲಿ ಹಾಜರು ಇದ್ದ ನಿರ್ದೇಶನಾಲಯದ ಪ್ರಾದೇಶಿಕ ನಿರ್ದೇಶಕ ಎಸ್.ವಿ. ವೆಂಕಟೇಶಯ್ಯ ಅವರು ಇನ್ನೂ ಕಾಲಾವಕಾಶ ಕೋರಿದರು. ಇದು ನ್ಯಾಯಮೂರ್ತಿಗಳ ಸಿಟ್ಟಿಗೆ ಕಾರಣವಾಯಿತು. `ಕೋರ್ಟ್ ಆದೇಶ ಎಂದರೆ ಏನು ತಿಳಿದುಕೊಂಡಿದ್ದೀರಿ. ನಿಮ್ಮನ್ನು ಜೈಲಿಗೆ ಕಳುಹಿಸಿದರಷ್ಟೇ ಬುದ್ಧಿ ಬರುತ್ತದೆ.

ಕೊನೆಯ ಗಡುವು ನೀಡಲಾಗುತ್ತಿದೆ. ಮುಂದೆಯೂ ಆದೇಶ ಪಾಲನೆಗೆ ವಿಫಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದ ಪೀಠ ಸಮೀಕ್ಷೆಗೆ ಕೊನೆಯ ಗಡುವು ನೀಡಿತು.ದೇವಾಲಯ ನೆಲಸಮ ಮಾಡುತ್ತಿರುವುದನ್ನು ಪ್ರಶ್ನಿಸಿ ಹಲವಾರು ಭಕ್ತರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಶತಮಾನದಷ್ಟು ಹಳೆಯದಾಗಿರುವ ಈ ದೇವಾಲಯವನ್ನು ನೆಲಸಮ ಮಾಡುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ. 
  
ಜಮೀನಿನ ಸಮೀಕ್ಷೆಗೆ ಆದೇಶ: ಯಲಹಂಕದ ಬಳಿ ಇರುವ ಸಿಂಗಾಪುರ ಗ್ರಾಮದಲ್ಲಿನ ವಿವಾದಿತ ಸುಮಾರು ಒಂಬತ್ತು ಎಕರೆ ಜಮೀನು ಸರ್ಕಾರದ್ದೋ ಅಥವಾ ಖಾಸಗಿಯವರಿಗೆ ಸೇರಿದ್ದೋ ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಹೈಕೋರ್ಟ್ ತಹಶೀಲ್ದಾರ್ ಅವರಿಗೆ ಶುಕ್ರವಾರ ಆದೇಶಿಸಿದೆ.

ಸರ್ಕಾರದ ಜಮೀನಿನಲ್ಲಿ ಖಾಸಗಿಯವರಿಗೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಲಾಗಿದೆ ಎಂದು ದೂರಿ ಸಾಬಣ್ಣ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

`ಈ ಸಮೀಕ್ಷೆ ನಡೆಸಿದ ನಂತರ ಆ ಬಗ್ಗೆ ನಗರ ಜಿಲ್ಲಾಧಿಕಾರಿಗಳು ವರದಿ ನೀಡಬೇಕು. ಈ ವರದಿಗೆ ಅರ್ಜಿದಾರರು ಹಾಗೂ ಜಮೀನು ಒತ್ತುವರಿ ಮಾಡಿಕೊಂಡಿರುವ ಆರೋಪ ಹೊತ್ತ ಶಾರದಮ್ಮ ಹಾಗೂ ಇತರರು ಬದ್ಧರಾಗಿರಬೇಕು~ ಎಂದು ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.