ADVERTISEMENT

ಯಾವನ್ರೀ ಅವ್ನು ಪೆಟ್ರೋಲಿಯಂ ಮಂತ್ರಿ: ಸಿದ್ದರಾಮಯ್ಯ ಗುಡುಗು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 20:24 IST
Last Updated 13 ಅಕ್ಟೋಬರ್ 2017, 20:24 IST
ಕಾಸಿಯಾ ಗೌರವಾಧ್ಯಕ್ಷ ಆರ್‌. ಹನುಮಂತೇಗೌಡ (ಬಲದಿಂದ ಎರಡನೆಯವರು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. ವಸತಿ ಸಚಿವ ಎಂ. ಕೃಷ್ಣಪ್ಪ, ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಇದ್ದಾರೆ.
ಕಾಸಿಯಾ ಗೌರವಾಧ್ಯಕ್ಷ ಆರ್‌. ಹನುಮಂತೇಗೌಡ (ಬಲದಿಂದ ಎರಡನೆಯವರು) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು. ವಸತಿ ಸಚಿವ ಎಂ. ಕೃಷ್ಣಪ್ಪ, ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಇದ್ದಾರೆ.   

ಬೆಂಗಳೂರು: ‘ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಬೇಕಂತೆ. ಯಾವನ್ರೀ ಅವ್ನು ಪೆಟ್ರೋಲಿಯಂ ಮಂತ್ರಿ’ ಎಂದು ಧರ್ಮೇಂದ್ರ ಪ್ರಧಾನ್ ಹೆಸರನ್ನೂ ಹೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏರುಧ್ವನಿಯಲ್ಲಿ ಪ್ರಶ್ನಿಸಿದರು.

ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ದರ ಕಡಿಮೆ ಮಾಡದೆ, ಅದನ್ನು ರಾಜ್ಯಗಳ ಮೇಲೆ ಹೊರಿಸುತ್ತಿರುವುದನ್ನು ರಾಜಕೀಯ ಗಿಮಿಕ್ ಎನ್ನಬೇಕೋ, ನಾಟಕ ಎನ್ನಬೇಕೋ ನೀವೇ ನಿರ್ಧರಿಸಿ’ ಎಂದು ಹೇಳಿದರು.

‘ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 110ರಿಂದ 120 ಡಾಲರ್ ಇತ್ತು. ಆಗ ಪೆಟ್ರೋಲ್ ದರ ಲೀಟರ್‌ಗೆ ₹ 68 ಇತ್ತು. ಈಗ ಕಚ್ಚಾ ತೈಲ ದರ ಬ್ಯಾರಲ್‌ಗೆ 40ರಿಂದ 50 ಡಾಲರ್‌ಗೆ ಇಳಿದಿದೆ. ಪೆಟ್ರೋಲ್ ದರ ಲೀಟರ್‌ಗೆ ₹ 30ರಿಂದ ₹ 40 ಇರಬೇಕಿತ್ತು’ ಎಂದರು.

ADVERTISEMENT

‘ತೈಲ ಬೆಲೆಗಳ ಮೇಲಿನ ಸಹಾಯಧನ ಹಿಂಪಡೆದಿರುವುದರಿಂದ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ಉಳಿತಾಯವಾಗಿದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ದರ ಯಾರು ಕಡಿಮೆ ಮಾಡಬೇಕು’ ಎಂದೂ ಪ್ರಶ್ನಿಸಿದರು.

‘ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬಂದ ಬಳಿಕ ಕೆಲವು ರಾಜ್ಯಗಳ ಆರ್ಥಿಕ ಸ್ಥಿತಿ ಕೆಟ್ಟದಾಗಿದೆ. 2004–05ರಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದ ಕಾರಣ ನಮ್ಮಲ್ಲಿ ಜಿಎಸ್‌ಟಿ ಪರಿಣಾಮ ಅಷ್ಟಾಗಿ ಕಾಣುತ್ತಿಲ್ಲ. ಜಿಎಸ್‌ಟಿ ಜಾರಿ ಗುಜರಾತ್‌ನಲ್ಲಿ ಕಷ್ಟವಾಗಿದ್ದು, ನಮ್ಮ ರಾಜ್ಯದ ಅಧಿಕಾರಿಗಳನ್ನು ಕಳುಹಿಸಿ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದರು.

‘ಸಣ್ಣ ಕೈಗಾರಿಕೆಗಳನ್ನು ಮೇಲೆತ್ತಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹೊಸ ಕೈಗಾರಿಕಾ ನೀತಿಯನ್ನೂ ಜಾರಿಗೆ ತರಲಾಗಿದೆ. ದಲಿತರು ಮತ್ತು ಮಹಿಳೆಯರು ನವೋದ್ಯಮ ಆರಂಭಿಸಲು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.

‘ಐ.ಟಿ ದಾಳಿ ನಡೆಯಬಹುದು ಜೋಪಾನ’
‘ಕೇಂದ್ರ ಸರ್ಕಾರ ₹ 500 ಮತ್ತು ₹ 1,000 ಮುಖಬೆಲೆಯ ನೋಟು ರದ್ದುಗೊಳಿಸಿದ್ದರಿಂದ ದೇಶದ ಜಿಡಿಪಿ ಕಡಿಮೆಯಾಗಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕಪ್ಪುಹಣ ಹೊಂದಿದವರು ಅದನ್ನು ಬಿಳಿಯಾಗಿಸಿಕೊಂಡಿದ್ದನ್ನು ಬಿಟ್ಟರೆ ಬೇರೇನೂ ಆಗಿಲ್ಲ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಇದನ್ನು ನಾನು ಹೇಳಿದರೆ ರಾಜಕೀಯವಾಗುತ್ತದೆ. ಉದ್ಯಮಿಗಳು ಸತ್ಯಾಂಶವನ್ನು ಸಮಾಜಕ್ಕೆ ತಿಳಿಸಬೇಕು. ಇದು ನನ್ನ ಮನವಿ, ಒತ್ತಾಯ ಅಲ್ಲ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದರೆ ನಿಮ್ಮ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಬಹುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.