ADVERTISEMENT

ಯುಎಫ್‌ಓ, ಕ್ಯೂಬ್‌ ನಿರ್ಬಂಧಕ್ಕೆ ಚಿತ್ರ ನಿರ್ಮಾಪಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 20:10 IST
Last Updated 3 ಮಾರ್ಚ್ 2018, 20:10 IST

ಬೆಂಗಳೂರು: ‘ಸಿನಿಮಾ ಪ್ರದರ್ಶನದ ಡಿಜಿಟಲ್‌ ಸೇವೆ ಪೂರೈಕೆದಾರ ಕಂಪನಿಗಳಾದ ಯುಎಫ್‌ಒ ಮತ್ತು ಕ್ಯೂಬ್‌ ಕಂಪೆನಿಗಳ ಮೇಲೆ ಮಾ. 9ರಿಂದ ಹೇರಲಾಗಿರುವ ನಿರ್ಬಂಧಕ್ಕೆ ಎಲ್ಲ ನಿರ್ಮಾಪಕರು ಬೆಂಬಲ ನೀಡಿದ್ದಾರೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ. ರಾ. ಗೋವಿಂದು ಹೇಳಿದರು.

ಶನಿವಾರ ವಾಣಿಜ್ಯ ಮಂಡಳಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾರ್ಚ್‌ 9ರಂದು ಬಿಡುಗಡೆಯಾಗಲಿರುವ ಎಂಟು ಸಿನಿಮಾಗಳ ನಿರ್ಮಾಪಕರೂ ಹಾಜರಿದ್ದರು.

‘ಮಾ. 9ರಂದು ಎಂಟು ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದರು. ಅವರಿಗೆ ಪರಿಸ್ಥಿತಿಯನ್ನು ವಿವರಿಸಿ ಬೆಂಬಲ ನೀಡುವಂತೆ ಕೋರಿಕೊಂಡಿದ್ದೇವೆ. ಅವರೆಲ್ಲರೂ ವಾಣಿಜ್ಯ ಮಂಡಳಿಯ ನಿರ್ಧಾರಕ್ಕೆ ಬದ್ಧರಾಗಿದ್ದು ಚಿತ್ರ ಬಿಡುಗಡೆಯನ್ನು ಮುಂದೂಡಲು ಒಪ್ಪಿಕೊಂಡಿದ್ದಾರೆ. ನಾವು ಕೇಳುತ್ತಿರುವ ದರಕ್ಕೆ ಡಿಜಿಟಲ್‌ ಸೇವೆಗಳನ್ನು ಕೊಡುವ ವ್ಯವಸ್ಥೆ ರೂಪುಗೊಳ್ಳುವವರೆಗೂ ಈ ನಿರ್ಬಂಧ ಮುಂದುವರಿಯಲಿದೆ’ ಎಂದು ಅವರು ಹೇಳಿದರು.

ADVERTISEMENT

ಹದಿನೈದು ದಿನಗಳಲ್ಲಿ ಸ್ಪಷ್ಟ ಚಿತ್ರಣ: ‘ಹಿಂದಿ ಸಿನಿಮಾಗಳಿಗೆ ಇದೇ ಕಂಪನಿಗಳು ವಾರಕ್ಕೆ ಕೇವಲ ₹ 2,500 ಶುಲ್ಕ ವಿಧಿಸುತ್ತಾರೆ. ಇಂಗ್ಲಿಷ್‌ ಸಿನಿಮಾಗಳಿಗೆ ಉಚಿತವಾಗಿಯೇ ಸೇವೆ ನೀಡುತ್ತಾರೆ. ಆದರೆ ಕನ್ನಡ ಸಿನಿಮಾಗಳಿಗೆ ಒಂದು ಚಿತ್ರಮಂದಿರಕ್ಕೆ ಹನ್ನೆರಡು ಸಾವಿರ ಶುಲ್ಕ ವಿಧಿಸುತ್ತಾರೆ. ಇದೊಂದು ಬಗೆಯಲ್ಲಿ ಏಕಸ್ವಾಮ್ಯದ ದಬ್ಬಾಳಿಕೆ. ಈಗ ಅವರಿಗೆ ಕಂಟೆಂಟ್‌ ಕೊಡುವುದನ್ನು ನಿಲ್ಲಿಸಿದರೆ ಉಳಿದ ಕಂಪನಿಗಳೂ ಡಿಜಿಟಲ್‌ ಸೇವೆ ನೀಡಲು ಮುಂದೆಬರುತ್ತಾರೆ. ಇನ್ನು ಹದಿನೈದು ದಿನಗಳಲ್ಲಿ ಸಂಪೂರ್ಣ ಚಿತ್ರಣ ಸಿಗಲಿದೆ’ ಎಂದು ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಎನ್‌.ಎಂ. ಸುರೇಶ್‌ ಹೇಳಿದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡಬಹುದು: ‘ಮಲ್ಟಿಪ್ಲೆಕ್ಸ್‌ಗಳಲ್ಲಿ ಅವುಗಳದ್ದೇ ಆದ ಪ್ರೊಜೆಕ್ಟರ್‌ ಮತ್ತು ಸರ್ವರ್‌ಗಳಿರುತ್ತವೆ. ಅಂಥ ಕಡೆಗಳಲ್ಲಿ ಯುಎಫ್‌ಓ ಮತ್ತು ಕ್ಯೂಬ್‌ಗಳ ಸೇವೆ ಅವಶ್ಯಕತೆ ಇರುವುದಿಲ್ಲ. ಅಂಥ 60 ಚಿತ್ರಮಂದಿರಗಳಿವೆ. ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿಯಷ್ಟೇ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಿರುವವರು ಖಂಡಿತವಾಗಿಯೂ ಚಿತ್ರಬಿಡುಗಡೆ ಮಾಡಬಹುದು’ ಎಂದೂ ಗೋವಿಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.