ADVERTISEMENT

ಯುಗಾದಿಗೆ ಮೆಟ್ರೊ: ಕಷ್ಟ ಕಷ್ಟ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 18:30 IST
Last Updated 29 ಮಾರ್ಚ್ 2011, 18:30 IST
ಯುಗಾದಿಗೆ ಮೆಟ್ರೊ: ಕಷ್ಟ ಕಷ್ಟ
ಯುಗಾದಿಗೆ ಮೆಟ್ರೊ: ಕಷ್ಟ ಕಷ್ಟ   

ಬೆಂಗಳೂರು: ಯುಗಾದಿ ಹಬ್ಬಕ್ಕೆ (ಏಪ್ರಿಲ್ 4) ಇನ್ನು ನಾಲ್ಕು ದಿನಗಳಷ್ಟೇ ಉಳಿದಿವೆ; ಅಂದು ಮೆಟ್ರೊ ರೈಲಿನ ಸಂಚಾರಕ್ಕೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವು ಬಾರಿ ಘೋಷಿಸಿದ್ದರು; ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿಯವರನ್ನು ಆಹ್ವಾನಿಸಲು ದೆಹಲಿಗೂ ಹೋಗಿದ್ದರು; ಪ್ರಧಾನಿಯವರು ಏನು ಪ್ರತಿಕ್ರಿಯೆ ನೀಡಿದರೆಂಬ ಬಗೆಗೆ ಅವರು ಏನನ್ನೂ ಹೇಳಲಿಲ್ಲ; ಕೆಲ ದಿನಗಳಿಂದ ಅವರು ಈ ಬಗ್ಗೆ ಯಾವುದೇ ಮಾತನ್ನೂ ಆಡುತ್ತಿಲ್ಲ.

ಇನ್ನೊಂದೆಡೆ ‘ಬೆಂಗಳೂರು ಮೆಟ್ರೊ ರೈಲು ನಿಗಮ’ದವರು (ಬಿಎಂಆರ್‌ಸಿಎಲ್) ಯುಗಾದಿ ಹಬ್ಬದ ದಿನದಂದು ರೈಲು ಓಡಿಸಲು ಸಿದ್ಧ ಎಂದು ಹೇಳುತ್ತಲೇ ಇದ್ದಾರೆ. ಅದೇ ಉಸಿರಿನಲ್ಲಿ ಮೆಟ್ರೊ ರೈಲು ಸಂಚಾರದ ದಿನಾಂಕವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗದಿ ಮಾಡಬೇಕು ಎಂದು ಹೇಳಲು ಅವರು ಮರೆಯುವುದಿಲ್ಲ. ಒಟ್ಟಾರೆ ಮೆಟ್ರೊ ರೈಲಿನ ಅಧಿಕೃತ ಸಂಚಾರ ಸದ್ಯಕ್ಕೆ ಪ್ರಾರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

‘ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ಮುನ್ನ 2,500 ಕಿ.ಮೀ.ಯಷ್ಟು ರೈಲಿನ ಪರೀಕ್ಷಾರ್ಥ ಓಡಾಟ ಮುಗಿದಿರಬೇಕು. ಜನವರಿ 24ರಿಂದ ಇಲ್ಲಿಯವರೆಗೆ 1,000 ಕಿ.ಮೀ. ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದೆ. ಸತತವಾಗಿ ಓಡಿಸಿದರೆ 10 ದಿನಗಳಲ್ಲಿ ಇನ್ನು 1,500 ಕಿ.ಮೀ. ಪರೀಕ್ಷಾರ್ಥ ಓಡಾಟ ನಡೆಸಬಹುದು’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ಹೇಳಿಕೆಯನ್ನೇ ಆಧರಿಸಿ ಹೇಳುವುದಾದರೆ  ಸೋಮವಾರ ರೈಲು ಸಂಚಾರ ಉದ್ಘಾಟನೆ ಸಾಧ್ಯವೇ ಇಲ್ಲ.

ಇದರ ಹೊರತಾಗಿ ಪವಾಡ ನಡೆದರೆ ಮಾತ್ರ ಯುಗಾದಿ ದಿನದಂದು ಮೆಟ್ರೊ ರೈಲಿನ ಸಾರ್ವಜನಿಕ ಸಂಚಾರ ಆರಂಭವಾಗಬಹುದು.ಬೈಯಪ್ಪನಹಳ್ಳಿಯಿಂದ ಎಂ.ಜಿ ರಸ್ತೆವರೆಗಿನ 6.7 ಕಿ.ಮೀ. ಉದ್ದದ ರೀಚ್- 1ರಲ್ಲಿ ಜೋಡಿ ಹಳಿ ಮಾರ್ಗ ನಿರ್ಮಾಣಗೊಂಡಿದೆ. ಆರು ನಿಲ್ದಾಣಗಳ ನಿರ್ಮಾಣದ ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ. ಆದರೆ ಸುರಕ್ಷಿತ ರೈಲು ಓಡಾಟಕ್ಕೆ ಅಗತ್ಯವಾದ ತಾಂತ್ರಿಕ ಏರ್ಪಾಡುಗಳನ್ನು ಮಾಡಲು ಇನ್ನಷ್ಟು ಸಮಯ ಬೇಕಾಗಿದೆ.

ಈ ಮಾರ್ಗದಲ್ಲಿ ಕಳೆದ ಡಿಸೆಂಬರ್ ಕೊನೆ ವಾರದಲ್ಲಿ ಮೆಟ್ರೊ ರೈಲಿನ ಸಂಚಾರ ಆರಂಭಿಸುವುದಾಗಿ ಘೋಷಿಸಲಾಗಿತ್ತು. ನಂತರ ಯುಗಾದಿ ಹಬ್ಬದ ದಿನದಂದು ಉದ್ಘಾಟನೆ ಮಾಡುವುದಾಗಿ ಪ್ರಕಟಿಸಲಾಗಿತ್ತು. ಈಗ ಮತ್ತೊಂದು ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.ಮೇಲ್ನೋಟಕ್ಕೆ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರವೇನೋ ಯಶಸ್ವಿಯಾಗಿ ನಡೆದಿದೆ. ದಕ್ಷಿಣ ಕೊರಿಯಾದಿಂದ ತರಿಸಿಕೊಂಡಿರುವ ಐದು ರೈಲು ಗಾಡಿಗಳ ಪೈಕಿ ಎರಡು ಗಾಡಿಗಳನ್ನು ರೀಚ್- 1ರ ಜೋಡಿ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಉಳಿದ ಮೂರು ರೈಲು ಗಾಡಿಗಳನ್ನು ಬೈಯಪ್ಪನಹಳ್ಳಿ ಡಿಪೋದಲ್ಲಿಯೇ ಪರೀಕ್ಷಿಸಲಾಗುತ್ತಿದೆ.

‘ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ಸಂಬಂಧ ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್) ಮುಂದೆ ಅಗತ್ಯ ದಾಖಲೆಗಳನ್ನು ಫೆಬ್ರುವರಿಯಲ್ಲಿ ಸಲ್ಲಿಸಿದ್ದೇವೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಹೇಳಿದರೆ, ಸಿಆರ್‌ಎಸ್ ಕೆ.ಜೆ.ಎಸ್.ನಾಯ್ಡು, ‘ಆಗ ಅಪೂರ್ಣವಾದ ಪ್ರಸ್ತಾವ ಸಲ್ಲಿಸಲಾಗಿತ್ತು. ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲಿಸಿ, ಪ್ರಮಾಣ ಪತ್ರ ನೀಡುತ್ತೇವೆ. ಆದರೆ ಇಂತಿಷ್ಟೇ ಸಮಯದಲ್ಲಿ ಪ್ರಮಾಣ ಪತ್ರ ನೀಡುತ್ತೇವೆ ಎಂದು ನಾನು ಹೇಳಲಾರೆ’ ಎಂದರು.

‘ಫೆ. 17ರಂದು ಸಿಆರ್‌ಎಸ್ ಮುಂದೆ ಆರಂಭಿಕವಾಗಿ ದಾಖಲೆ ಪತ್ರಗಳನ್ನು ಸಲ್ಲಿಸಿದ್ದೇವೆ. ನಂತರ ಅವರು ಕೇಳಿದ ವಿವರ ಮತ್ತು ದಾಖಲೆಗಳನ್ನು ಒಳಗೊಂಡ 3,000ಕ್ಕೂ ಹೆಚ್ಚು ಪುಟಗಳ ಕಡತಗಳನ್ನು ಮಾರ್ಚ್ 14ರಂದು ಸಲ್ಲಿಸಿದ್ದೇವೆ. ಅದಕ್ಕೂ ಮೊದಲು ಆರು ತಿಂಗಳಿಂದ ರೈಲ್ವೆ ಇಲಾಖೆಯ ಸಂಶೋಧನಾ ವಿನ್ಯಾಸಗಳು ಮತ್ತು ಮಾನದಂಡಗಳ ಸಂಘಟನೆಗೆ (ಆರ್‌ಡಿಎಸ್‌ಒ) ರಾಶಿ ರಾಶಿ ಕಡತಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಅವರೇ ಹೇಳುವ ಪ್ರಕಾರ, ‘ಸುರಕ್ಷತಾ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಆರ್‌ಡಿಎಸ್‌ಒ ಮತ್ತು ನಾಗರಿಕ ವಿಮಾನಯಾನ ಇಲಾಖೆ ಅಡಿ ಬರುವ ಸಿಆರ್‌ಎಸ್ ಕಚೇರಿ ನಡುವೆ ಗೊಂದಲ ಇದ್ದಂತಿದೆ. ಅದನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳಾಗುತ್ತಿವೆ’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.