ADVERTISEMENT

ಯುವಕನಿಗೆ ಚೆಲ್ಲಾಟ, ದಂಪತಿಗೆ ಪ್ರಾಣ ಸಂಕಟ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:30 IST
Last Updated 8 ಏಪ್ರಿಲ್ 2018, 19:30 IST

ಬೆಂಗಳೂರು: ನಗರದ ಗೋಪಾಲನ್‌ ಮಾಲ್‌ ಸಮೀಪ ಯುವಕನೊಬ್ಬ ಫುಟ್‌ಪಾತ್‌ಗೆ ಬೈಕ್‌ ನುಗ್ಗಿಸಿ, ಪಾದಚಾರಿ ದಂಪತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಯುವಕ ನೀಡಿದ ಕಿರುಕುಳದ ಬಗ್ಗೆ ನರೇಶ್‌ ನಾಯಕ್‌ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿವರಿಸಿ, ಅದನ್ನು ‘ಬೆಂಗಳೂರು ನಗರ ಪೊಲೀಸ್‌’ ಫೇಸ್‌ಬುಕ್‌ ಖಾತೆಗೆ ಟ್ಯಾಗ್‌ ಮಾಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.

‘ಶನಿವಾರ (ಏಪ್ರಿಲ್‌7) 7ರಿಂದ7.30ರ ಸುಮಾರಿಗೆ ನಾನು ಮತ್ತು ನನ್ನ ಪತ್ನಿ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಗೋಪಾಲನ್‌ ಮಾಲ್‌ ಸಮೀಪ ಫುಟ್‌ಪಾತ್‌ಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಬೈಕ್‌ನಲ್ಲಿ (ಕೆಎ–51–ಇಎಮ್‌–4767) ವೇಗವಾಗಿ ಬಂದು ಫುಟ್‌ಪಾತ್‌ಗೆ ಬೈಕ್‌ ನುಗ್ಗಿಸಿದ್ದಾನೆ. ಇದರಿಂದ ಕೆಲಕಾಲ ನಮಗೆ ದಿಕ್ಕೇ ತೋಚದಂತಾಯಿತು’ ಎಂದು ಬರೆದಿದ್ದಾರೆ.

ADVERTISEMENT

‘ಇನ್ನೇನು ಬೈಕ್‌ ಮೈಮೇಲೆ ಬಂದೇ ಬಿಟ್ಟಿತು ಎಂದು ಊಹಿಸಿದ ಪತ್ನಿ ತಕ್ಷಣವೇ ಪಕ್ಕಕ್ಕೆ ಸರಿದು ಪಾರಾಗಿದ್ದಾರೆ. ಈ ಬಗ್ಗೆ ಆತನನ್ನು ಪ್ರಶ್ನಿಸಿದಾಗ, ನಮ್ಮನ್ನೇ ಕೆಟ್ಟ ಪದಗಳಿಂದ ಮನಬಂದಂತೆ ಬೈದು, ನೀವು ಯಾರಿಗೇ ಬೇಕಾದರೂ ದೂರು ನೀಡಿ, ನಾನು ಹೆದರುವುದಿಲ್ಲ. ಎಲ್ಲ ಹಿರಿಯ ಅಧಿಕಾರಿಗಳು ನನಗೆ ಪರಿಚಯವಿದ್ದಾರೆ’ ಎಂದು ಸವಾಲು ಹಾಕಿದ್ದಾನೆ ಎಂದು ಬರೆದುಕೊಂಡಿದ್ದಾರೆ.

‘ನಾನು ಬೈಕ್‌ನ ನೋಂದಣಿ ಸಂಖ್ಯೆಯ ಫೋಟೊ ತೆಗೆಯಲು ಮುಂದಾದಾಗ, ಬೈಕ್‌ನಿಂದ ಇಳಿದ ಯುವಕ ನನ್ನ ಕುತ್ತಿಗೆ ಹಿಡಿದು ಮುಖಕ್ಕೆ ಬಲವಾಗಿ ಗುದ್ದಿದ್ದಾನೆ. ಈ ಘಟನೆಯನ್ನು ಅಲ್ಲಿಯೇ ಇದ್ದ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರ ಗಮನಕ್ಕೆ ತಂದಾಗ, ಆತನ ಬಗ್ಗೆ ನೀವು ಠಾಣೆಗೆ ಹೋಗಿ ದೂರು ನೀಡಿ ಎಂದು ತಿಳಿಸಿ ಜಾರಿಕೊಂಡರು’ ಎಂದು ಉಲ್ಲೇಖಿಸಿದ್ದಾರೆ.

ಆತನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾಯಕ್‌ ಅವರು ನೋಂದಣಿ ಸಂಖ್ಯೆಯ ಚಿತ್ರವನ್ನು ಬೆಂಗಳೂರು ನಗರ ಪೊಲೀಸ್‌, ಬೆಂಗಳೂರು ಸಂಚಾರ ಪೊಲೀಸರಿಗೆ ಕಳುಹಿಸಿದ್ದಾರೆ.

ಈ ಪೋಸ್ಟ್‌ಗೆ 31 ಜನ ಪ್ರತಿಕ್ರಿಸಿದ್ದು, ನಗರದಲ್ಲಿ ಇಂಥವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನು 33 ಜನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.