ADVERTISEMENT

ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗಳ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಬೆಂಗಳೂರು: ಅಸ್ಸಾಂನ ಗುವಾಹಟಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಶೀಘ್ರವೇ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

`ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕೃತ್ಯ ನಡೆದ ದಿನ ಮುಖ್ಯಮಂತ್ರಿ ತರುಣ್ ಗೊಗಾಯ್ ಹೇಳಿದ್ದರು. ಆದರೆ, ಘಟನೆ ನಡೆದು ವಾರ ಕಳೆದರೂ ಕೇವಲ ಮೂರ‌್ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಕೃತ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ.

ಮಾಧ್ಯಮಗಳ ವರದಿ ಅನ್ವಯ 15 ರಿಂದ 20 ಮಂದಿ ದುಷ್ಕರ್ಮಿಗಳ ಗುಂಪು ಈ ಹೇಯ ಕೃತ್ಯವೆಸಗಿದ್ದಾರೆ. ತನಿಖೆ ನಡೆಸಿ ಎಲ್ಲಾ ಆರೋಪಿಗಳಿಗೂ ಕಠಿಣ ಶಿಕ್ಷೆ ನೀಡಬೇಕು~ ಎಂದು ಸಂಘಟನೆಯ ಅಧ್ಯಕ್ಷೆ ಪ್ರತಿಭಾ ಕುಮಾರಿ ಆಗ್ರಹಿಸಿದರು.

`ಆರೋಪಿಗಳು, ಯುವತಿ ಮೇಲೆ ಗುಂಪು ಹಲ್ಲೆ ನಡೆಸಿದ್ದಲ್ಲದೆ, ಆಕೆಯ ಬಟ್ಟೆಗಳನ್ನು ಹರಿದು ಹಾಕಲು ಪ್ರಯತ್ನಿಸಿದ್ದರು. ಅಲ್ಲದೆ, ಯುವತಿಯ ದೇಹಕ್ಕೆ ಸಿಗರೇಟಿನಿಂದ ಸುಟ್ಟಿದ್ದರು. ಇದು ನಮ್ಮ ದೇಶದ ಒಂದು ಕರಾಳ ದಿನ. ಇಂತಹ ಕೃತ್ಯಗಳು ಹೆಚ್ಚುತ್ತಿರುವುದಕ್ಕೆ ಮಾಧ್ಯಮಗಳಲ್ಲಿ ಅಶ್ಲೀಲತೆಗೆ ಸಿಗುತ್ತಿರುವ ಪ್ರಚಾರ ಒಂದು ಕಾರಣವಾದರೆ, ಮದ್ಯದ ಅಂಗಡಿ ತೆರೆಯಲು ಕಾನೂನುಗಳಲ್ಲಾಗಿರುವ ಸಡಿಲಿಕೆ ಮತ್ತೊಂದು ಪ್ರಮುಖ ಕಾರಣ~ ಎಂದು ಅವರು ಆರೋಪಿಸಿದರು.

`ದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣ. ಸಮಾಜದಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿದ್ದು, ಸರ್ಕಾರ ಶೀಘ್ರವೇ ಎಚ್ಚೆತ್ತುಕೊಳ್ಳುವ ಅಗತ್ಯವಿದೆ~ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಸಂಘಟನೆಯ ಕಾರ್ಯದರ್ಶಿ ಶೋಭಾ, ಹರಿಣಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.